ಅರಸೀಕೆರೆ ನಗರದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಗುರು ಪರದೇಶೀಕೇಂದ್ರ ಸ್ವಾಮೀಜಿ, ಕೆ.ಎಂ.ಶಿವಲಿಂಗೇಗೌಡ, ಶ್ರೀ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಶ್ರೀ ರುದ್ರಮುನಿ ಸ್ವಾಮೀಜಿ ಇತರರಿದ್ದರು.
ಅರಸೀಕೆರೆ : ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಕಂಚಿನ ಪುತ್ಥಳಿ ಬಸವ ಜಯಂತಿ ದಿನ ಸೋಮವಾರ ಲೋಕಾರ್ಪಣೆಗೊಂಡಿತು.
ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕ ಶಿವಗುರು ಶಾಸ್ತ್ರಿ ನೇತೃತ್ವದಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ, ಗ್ರಾಮ ದೇವತೆ ಕರಿಯಮ್ಮ ಮತ್ತು ಮಲ್ಲಿಗೆಮ್ಮ, ಧೂತರಾಯ, ಚೆಲುವರಾಯಸ್ವಾಮಿ ಅವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ತಿಪಟೂರು ತಾಲೂಕಿನ ಸುಕ್ಷೇತ್ರ ಕೆರಗೋಡಿ ರಂಗಾಪುರ ಶ್ರೀಮಠದ ಜಗದ್ಗುರು ಶ್ರೀ ಗುರುಪರದೇಶೀ ಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾನತೆಯ ಸಂದೇಶ ಸಾರಿದ ಬಸವೇಶ್ವರರ ತತ್ವ, ಚಿಂತನೆ, ಆದರ್ಶಗಳು ವಿಶ್ವಮಾನ್ಯವಾಗಿದ್ದು ಶ್ರೇಷ್ಠ ಮಹಾ ಪುರುಷನ ಸ್ಮರಣೆ ಅತ್ಯಂತ ಔಚಿತ್ಯಪೂರ್ಣವಾಗಿದೆ. ಜಗಜ್ಯೋತಿ ಶ್ರೀ ಬಸವೇಶ್ವರರ 893ನೇ ಜಯಂತಿ ದಿನದಂದು ಅಶ್ವಾರೂಢ ಕಂಚಿನ ಪುತ್ಥಳಿ ಅರಸೀಕೆರೆ ನಗರದಲ್ಲಿ ಲೋಕಾರ್ಪಣೆಗೊಂಡಿದ್ದು ಎಂದಿಗೂ ಮರೆಯಲಾಗದ ಕ್ಷಣವಾಗಿದೆ. ಬಸವಣ್ಣನವರ ತತ್ವ, ಚಿಂತನೆ, ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಅಗತ್ಯವಿದೆ. ಇಂತಹ ಒಳ್ಳೆಯ ಕೆಲಸದಲ್ಲಿ ಪಾಲ್ಗೊಂಡ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಸಮಿತಿಯ ಸದಸ್ಯರು ಅಭಿನಂದನಾರ್ಹರು ಎಂದು ಹೇಳಿದರು.
ಯಳನಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಯ ಬಹುಕಾಲದ ಕನಸು ನನಸಾಗಿದೆ ಎಂದರು.
ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ, ಬಸವೇಶ್ವರರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯವಾಗಿದೆ. ಶಾಸಕನಾದ ಬಳಿಕ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ನೋಡಿಕೊಂಡಿದ್ದೇನೆ. ಐತಿಹಾಸಿಕ ಕ್ಷಣದಲ್ಲಿ ನನ್ನೊಂದಿಗೆ ವೀರಶೈವ ಸಮಾಜದ ಮುಖಂಡರು, ಬಸವೇಶ್ವರರ ಅನುಯಾಯಿಗಳು ಸೇರಿದಂತೆ ಎಲ್ಲ ಸಮುದಾಯದವರು ಸಹಕಾರ ನೀಡಿದ್ದಾರೆ. ಕುಡಿಯುವ ನೀರು, ಶಾಲೆ, ಆಸ್ಪತ್ರೆ,ರಸ್ತೆ ಸೇರಿದಂತೆ ಶಾಶ್ವತ ಯೋಜನೆಗಳನ್ನು ನೀಡಿದ್ದು, ಅವುಗಳೊಂದಿಗೆ ಧಾರ್ಮಿಕ ಕ್ಷೇತ್ರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಮೈಲಿಗಲ್ಲು ಆಗಿದೆ. ಕ್ಷೇತ್ರದ ಅಭಿವೃದ್ಧಿಯನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯೋಣ ಎಂದು ಹೇಳಿದರು.
ಮಾಡಾಳು ನಿರಂಜನಪೀಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರ ಶೇಖರ ಸ್ವಾಮೀಜಿ, ಡಿ.ಎಂ.ಕುರ್ಕೆ ಬೂದಿಹಾಳ್ ವೀರಕ್ತ ಮಠದ ಶಶಿಶೇಖರ ಸಿದ್ದಬಸವ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಬಿ. ಶಶಿಧರ್, ಗಂಡಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೇಟ್ರೋ ಬಾಬು, ಅಡವಿಸ್ವಾಮಿ , ಜಿ.ವಿ ಬಸವರಾಜು, ಗಂಜಿಗೆರೆ ಚಂದ್ರಶೇಖರ್,ಜ್ಞಾನೇಶ್,ಮುರುಂಡಿ ಶಿವಯ್ಯ, ಕಾಟಿಕೆರೆ ಉಮೇಶ್, ಹರೀಶ್, ಜ್ಞಾನೇಶ್, ಹನುಮಪ್ಪ, ಜಿ.ಪಂ ಮಾಜಿ ಸದಸ್ಯರಾದ ಬಿಳಿಚೌಡಯ್ಯ, ಮಾಡಾಳು ಸ್ವಾಮಿ, ಮುಖಂಡರಾದ ಬೆಳಗುಂಬ ಜಯಣ್ಣ, ಕೆಟಿಸಿ ದಿವಾಕರ್ ಇದ್ದರು.
ಶ್ಯಾನುಭೋಗರ ರಸ್ತೆ ಬದಿಗೆ ಹೊಂದಿಕೊಂಡಂತಿರುವ ಬಸವೇಶ್ವರ ದೇಗುಲದಲ್ಲಿ ಪಾನಕ, ಫಲಹಾರ ವಿತರಿಸಿ ಬಸವ ಜಯಂತಿ ಆಚರಿಸಲಾಯಿತು.