ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.  
ಹಾಸನ

ಮಹನೀಯರ ಜಯಂತಿ ಆಚರಣೆ ಬಹಿಷ್ಕಾರ ಸರಿಯಲ್ಲ

ಅರಸೀಕೆರೆ : ಒಳ ಮೀಸಲಾತಿ ಅನುಷ್ಠಾನ ವಿಳಂಬದ ಹೆಸರಿನಲ್ಲಿ ಮಹನೀಯರ ಜಯಂತಿ ಆಚರಣೆ ಬಹಿಷ್ಕರಿಸುವುದು ಸರಿಯಲ್ಲ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು ಸಿಗಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಮೀಸಲಾತಿ ಜಾರಿ ಅನುಷ್ಠಾನ ವಿಳಂಬವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವಾಸ್ತವ ತಿಳಿಯದೇ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯೊಂದಿಗೆ ಬಾಬು ಜಗಜೀವನರಾಮ್ ಜಯಂತಿ ಆಚರಣೆಯಿಂದ ದೂರ ಉಳಿಯುವುದಾಗಿ ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದಕ್ಕೆ ಸಮಾಜದ ಮುಖಂಡರೇ ಉತ್ತರ ನೀಡಬೇಕು ಎಂದು ತಿಳಿಸಿದರು.
ಒಳ ಮೀಸಲಾತಿ ವಿಳಂಬದ ಹೆಸರಿನಲ್ಲಿ ಮಹನೀಯರ ಜಯಂತಿ ಆಚರಣೆ ಬಹಿಷ್ಕರಿಸುವುದು ಸರಿಯಲ್ಲ. ನಿಗದಿಯಂತೆ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಜಯಂತಿ ಆಚರಿಸೋಣ. ಬೇರೊಂದು ದಿನ ಸಭೆ ಕರೆದು ಉಭಯ ನಾಯಕರ ಹುಟ್ಟುಹಬ್ಬ ವಿಜೃಂಭಣೆಯಿಂದ ಮಾಡಲು ನಿರ್ಧಾರ ಮಾಡೋಣ. ಯಾರು ಏನೇ ಹೇಳಿದರೂ ಜಯಂತಿ ಮಾಡಿಯೇ ತೀರುತ್ತೇನೆ ಎಂದು ಘೋಷಿಸಿದರು.
ನಗರಸಭೆ ಮಾಜಿ ಸದಸ್ಯ ಉಮಾಶಂಕರ್, ತಹಸೀಲ್ದಾರ್ ಎಂ.ಜೆ. ಸಂತೋಷ್, ತಾ.ಪಂ ಇಒ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಉಪ ನಿರ್ದೇಶಕ ಪರಶಿವಮೂರ್ತಿ, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಕೃಷ್ಣ ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯೆ ಮಂಜುಳಾ ಚಂದ್ರನಾಯಕ, ಮುಖಂಡರಾದ ವೆಂಕಟೇಶ್, ಕೆಜೆಪಿ ಮಂಜು, ಆನಂದ್, ಶಂಕರಯ್ಯ ಇದ್ದರು.