ಸರ್ಕಾರಿ ಪದವಿ ಪೂರ್ವ ಕಾಲೇಜು ಅವರದಲ್ಲಿ ಶಾಸಕ ಸೀಮೆಂಟ್ ಮಂಜು ಶೌಚಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜ್‌ಕುಮಾರ್, ಬಿಇಒ ಪುಷ್ಪಲತಾ, ಪ್ರಾಂಶುಪಾಲ ವೆಂಕಟೇಶ್, ವೆಂಕಟಮ್ಮ ಸೇರಿದಂತೆ ಇತರರು ಇದ್ದರು.
- ಶಾಸಕ ಸಿಮೆಂಟ್ ಮಂಜು ಹೇಳಿಕೆ
- ಶೌಚಗೃಹ ನಿರ್ಮಾಣಕ್ಕೆ ಭೂಮಿ ಪೂಜೆ
ಸಕಲೇಶಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ಕಾಲೇಜು ಅವರಣದಲ್ಲಿ ಶೌಚಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುಮಾರು 8 ದಶಕಗಳ ಹಿಂದೆ ಬ್ರಿಟಿಷ ಪ್ರಜೆ ಇ.ಎಚ್. ಯಂಗ್ಸ್ ನಿರ್ಮಿಸಿದ ಕಾಲೇಜು ಕಾಲಕಾಲಕ್ಕೆ ದುರಸ್ತಿ ನಡೆಸಿದರೂ ಸುಸ್ಥಿತಿಗೆ ಬಂದಿಲ್ಲ. ಆದ್ದರಿಂದ ಪ್ರೌಢಶಾಲೆ ಇರುವ ಕಟ್ಟಡ ಸಂಪೂರ್ಣ ನೆಲಸಮಗೊಳಿಸಿ ಮೂರು ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು.
ಕಳೆದ ಎರಡು ವರ್ಷದಲ್ಲಿ ಕಾಲೇಜಿನ ಸುತ್ತ ಕಾಂಪೌಂಡ್, ಶೌಚಗೃಹ, ಕಟ್ಟಡ ದುರಸ್ತಿಗಾಗಿ ಸುಮಾರು 30 ಲಕ್ಷ ರೂ. ವ್ಯಯಿಸಲಾಗಿದೆ. ಅಪಾರ ಮೊತ್ತದ ಹಣ ಖರ್ಚು ಮಾಡಿದರು ಕಟ್ಟಡ ಸುಸ್ಥಿತಿಗೆ ಬಾರದಾಗಿದೆ. ಕಳೆದ ವರ್ಷ ಬಾಲಕರಿಗಾಗಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿನ ಶೌಚಗೃಹ ನಿರ್ಮಿಸಲಾಗಿದ್ದರೆ, ಸದ್ಯ ಅಷ್ಟೆ ಪ್ರಮಾಣದ ಅನುದಾನದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಇದಲ್ಲದೆ ಸಂಪೂರ್ಣ ಬೀಳುವ ಹಂತದಲ್ಲಿರುವ ಪ್ರೌಢಶಾಲೆ ವಿಭಾಗದ ಮೂರು ಕೊಠಡಿಗಳನ್ನು ಐದು ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಕಾಲೇಜು ರಕ್ಷಣೆ ಸಮಸ್ಯೆ ಎದುರಿಸುತ್ತಿದ್ದು ರಾತ್ರಿ ವೇಳೆ ಕಾಲೇಜು ಅವರಣದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಗಸ್ತು ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜ್‌ಕುಮಾರ್, ಬಿಇಒ ಪುಷ್ಪಲತಾ, ಪ್ರಾಂಶುಪಾಲ ವೆಂಕಟೇಶ್, ವೆಂಕಟಮ್ಮ ಇತರರು ಇದ್ದರು.