ತೆರದ ಮನೆ ಕಾರ್ಯಕ್ರಮದ ಅಂಗವಾಗಿ ಬೇಲೂರು ತಾಲೂಕಿನ ಅರೇಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭ ಪಿಎಸ್‌ಐ ಶೋಭಾ ಭರಮಣ್ಣ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಶಂಶುದ್ದೀನ್ ಸೊನ್ನದ್, ರವಿಚಂದ್ರ, ಮಂಜುನಾಥ, ದರ್ಶನ್ ಹಾಗೂ ಶಾಲಾ ಶಿಕ್ಷಕರಿದ್ದರು. 
ಹಾಸನ

ಸಾಮಾಜಿಕ ಜಾಲತಾಣ ಬಳಕೆಗೆ ಮಿತಿ ಇರಲಿ

ಎ. ಆರ್. ರಘುರಾಮ
ಬೇಲೂರು : ತೆರದ ಮನೆ(ಓಪನ್ ಹೌಸ್) ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಅರೇಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಅರೇಹಳ್ಳಿ ಪೊಲೀಸ್ ಠಾಣೆಗೆ ಆಹ್ವಾನಿಸಿ, ಠಾಣೆಯ ಕಾರ್ಯವೈಖರಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಪಿಎಸ್‌ಐ ಶೋಭಾ ಭರಮಣ್ಣ ಮಾಹಿತಿ ನೀಡಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭ ಸಹಾಯಕ್ಕಾಗಿ ಬಳಸ ಬಹುದಾದ 112
ಸೇವೆಯ ಮಹತ್ವ, ಪೊಕ್ಸೋ ಕಾಯ್ದೆಯಡಿಯಲ್ಲಿ ಮಕ್ಕಳಿಗೆ ಇರುವ ಕಾನೂನು ರಕ್ಷಣೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಉದ್ದೇಶ ಮತ್ತು ಪರಿಣಾಮಗಳು, ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯತೆ, ಹಾಗೂ ಸೈಬರ್ ಕ್ರೈಂ ಸಂಬಂಧಿತ ಅಪರಾಧಗಳು, ಆನ್‌ಲೈನ್ ಮೋಸ, ನಕಲಿ ಲಿಂಕ್, ಒಟಿಪಿ ದುರುಪಯೋಗದಿಂದ ದೂರ ಇರುವ ಕ್ರಮಗಳು ಕುರಿತು ವಿವರವಾಗಿ ತಿಳಿಸಲಾಯಿತು.
ಪಿಎಸ್‌ಐ ಶೋಭಾ ಭರಮಣ್ಣ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರಿವು ಹೊಂದಿದರೆ ಸಮಾಜದಲ್ಲಿ ಅಪರಾಧಗಳನ್ನು ತಡೆಯಲು ಸಾಧ್ಯ. ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮಿತಿ ಮತ್ತು ಎಚ್ಚರಿಕೆ ವಹಿಸಬೇಕು ಎಂದರು.
ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಸಂದೇಶ ಹಾಗೂ ಲಿಂಕ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸದೆ ಪೋಷಕರು ಅಥವಾ ಶಿಕ್ಷಕರಿಗೆ ತಿಳಿಸಬೇಕು ಎಂದು ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಜೀವವನ್ನು ಕಾಪಾಡಿ ಕೊಳ್ಳಬೇಕು. ಯಾವುದೇ ಅಕ್ರಮ ಚಟುವಟಿಕೆಗಳು, ಬಾಲ್ಯ ವಿವಾಹ ಅಥವಾ ಮಕ್ಕಳ ಮೇಲಿನ ದೌರ್ಜನ್ಯಗಳ ಮಾಹಿತಿ ನಿಮಗೆ ದೊರೆತರೆ ಭಯವಿಲ್ಲದೆ ಪೊಲೀಸರನ್ನು ಸಂಪರ್ಕಿಸಿ ತಿಳಿಸಬೇಕು. ಪೊಲೀಸ್ ಇಲಾಖೆ ಸದಾ ಸಾರ್ವಜನಿಕರ ರಕ್ಷಣೆಗೆ ಬದ್ಧವಾಗಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪೊಲೀಸರ ನೆರವು ಪಡೆಯ ಬಹುದಾಗಿದೆ ಎಂದರು.
ಪೊಲೀಸ್ ಸಿಬ್ಬಂದಿ ಶಂಶುದ್ದೀನ್ ಸೊನ್ನದ್, ರವಿಚಂದ್ರ, ಮಂಜುನಾಥ, ದರ್ಶನ್ ಹಾಗೂ ಶಾಲಾ ಶಿಕ್ಷಕರಿದ್ದರು.