ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಪಡುವಳಲು ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸದ ಅಂಗವಾಗಿ ಮಂಗಳವಾರ ಸಾವಿರಾರು ಭಕ್ತರು ಸಂಗಮಿಸಿದ್ದರು.
ಬೇಲೂರು : ತಾಲೂಕಿನ ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹನಿಕೆ ಗ್ರಾಮದಿಂದ ಗ್ರಾಮ ದೇವತೆಗಳಾದ ಶ್ರೀ ಆದಿ ಶಕ್ತಿ ಕರಿಯಮ್ಮ, ವೀರಭದ್ರಸ್ವಾಮಿ ಹಾಗೂ ಭೂತಪ್ಪ ಸ್ವಾಮಿಯನ್ನು ಗಂಗೆ ಪೂಜೆಯೊಂದಿಗೆ ಗ್ರಾಮಕ್ಕೆ ಬರಮಾಡಿ ಕೊಳ್ಳಲಾಯಿತು. ನಂತರ ಗ್ರಾಮಸ್ಥರು ಶ್ರೀ ಬಸವೇಶ್ವರ, ತಿರುಮಲೇಶ್ವರ, ವೀರಭದ್ರಸ್ವಾಮಿಗೆ ಗಂಗಾಭಿಷೇಕ ಮಾಡಿದರು. ದೇವಸ್ಥಾನದಲ್ಲಿ ನವಗ್ರಹ ಕಳಸ ಪೂಜೆ ನೆರವೇರಿಸಲಾಯಿತು. ಲೋಕ ಕಲ್ಯಾಣಾರ್ಥ ವಿವಿಧ ಹೋಮಗಳನ್ನು ನಡೆಸಿ ಎಲ್ಲ ದೇವರುಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಮಂಗಳವಾರ ಬೆಳಗ್ಗೆ ಸಮೀಪದ ಯಗಚಿ ನದಿಯಲ್ಲಿ ಗಂಗೆ ಪೂಜೆ ನಂತರ ನಂದಿ ಧ್ವಜ
ಕುಣಿತದೊಂದಿಗೆ ಮಹಿಳೆಯರು ಪೂರ್ಣ ಕುಂಭಗಳ ಸಮೇತ ಶ್ರೀ ವೀರಭದ್ರ ಕುಣಿತದೊಂದಿಗೆ ದೇವರುಗಳ ಅಡ್ಡೆಗಳನ್ನು ಗ್ರಾಮದ ರಾಜ ಬೀದಿಯಲ್ಲಿ ಉತ್ಸವ ಮಾಡಿದರು. ಈ ಸಂದರ್ಭ ಗ್ರಾಮಸ್ಥರ ಸಂಭ್ರಮೋತ್ಸವ ಗಮನ ಸೆಳೆಯಿತು. ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಸಮೀಪ ಉತ್ಸವ ಆಗಮಿಸಿದಾಗ ದೇಗುಲದ ಮುಂಭಾಗದಲ್ಲಿ ಕೊಂಡೋತ್ಸವ ನಡೆಯಿತು. ಭಕ್ತಿ ಪರವಶರಾಗಿ ಕೊಂಡವನ್ನು ತುಳಿದ ನೂರಾರು ಭಕ್ತರು ಧನ್ಯತೆ ಮೆರೆದರು.
ಪಡುವಳಲು ಗ್ರಾಮದಲ್ಲಿ ಎರಡು ದಿನ ನಡೆದ ಧಾರ್ಮಿಕ ಸಮಾರಂಭ, ವಿಧಿ ವಿಧಾನಗಳು ಮತ್ತು ಜಾತ್ರಾ ಮಹೋತ್ಸವದಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿ, ಶ್ರದ್ಧಾ ಭಕ್ತಿಯಿಂದ ದೇವರುಗಳಿಗೆ ಪೂಜೆ ಸಲ್ಲಿಸಿದ್ದು ಗಮನ ಸೆಳೆಯಿತು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ಎರಡು ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.