ಬಿ.ಶಿವರಾಮ್ 
ಹಾಸನ

ವಿದ್ಯುತ್ ಸಬ್ ಸ್ಟೇಷನ್‌ಗಳ ಅಭಿವೃದ್ಧಿ ಮಾಡಿ

ಎ. ಆರ್. ರಘುರಾಮ
ಬೇಲೂರು : ಬೇಲೂರು ಕ್ಷೇತ್ರದ ಶಾಸಕರಿಗೆ ಚರಂಡಿ, ರಸ್ತೆ ಕಾಮಗಾರಿಗಳ ಬಗ್ಗೆ ಹೆಚ್ಚು ಆಸಕ್ತಿ. ಆದರೆ ತಾಲೂಕಿನ ವಿವಿಧ ಭಾಗದಲ್ಲಿ ನಿರ್ಮಿಸ ಬೇಕಿರುವ ವಿದ್ಯುತ್ ಸಬ್ ಸ್ಟೇಷನ್‌ಗಳ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ಬಿ.ಶಿವರಾಮ್ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ರೈತರಿಗೆ ಉಚಿತವಾಗಿ ಕೊಡುತ್ತಿರುವ ವಿದ್ಯುತ್ ಸಿಗಬಾರದು ಎಂಬುದು ಶಾಸಕರ ಉದ್ದೇಶವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು. ಬೇಲೂರು ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತಿದ್ದೇವೆ. ತಾಲೂಕಿನ ಹನಿಕೆ, ಬಿಕ್ಕೋಡು, ಗೆಂಡೇಹಳ್ಳಿಯಲ್ಲಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಗೆ ಯಾವುದೇ ಗುತ್ತಿಗೆದಾರರು ಮುಂದೆ ಬರದೆ ಇರಲು ಪ್ರಮುಖವಾಗಿ ರೈತರು, ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರದ ಕೊರತೆ ಕಾರಣವಾಗಿತ್ತು. ಜತೆಗೆ ಜಿಲ್ಲೆಯಲ್ಲಿ 30 ರಿಂದ 40 ಕೋಟಿ ರೂ, ಕಾಮಗಾರಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಆದರೆ ಈಗ ಹನಿಕೆ(ಚನ್ನಾಪುರ)ಯಲ್ಲಿ ಎಂಎಸ್‌ಎಸ್ ಸ್ಟೇಷನ್‌ಗೆ ಪೂರ್ಣ ಪ್ರಮಾಣದಲ್ಲಿ ಸಿಂಗಲ್ ಟೆಂಡರ್ ಹಾಕಿ ಕೆಲಸ ಮಾಡುತ್ತಿದ್ದಾರೆ. ಇವುಗಳನ್ನು ಮಾಡಿಸಲು ನಾನು ಏನೇನು ಕೆಲಸ ಮಾಡಿದ್ದೇನೆ ಎಂಬುದನ್ನು ದಾಖಲೆ ಸಮೇತ ತೋರಿಸುತ್ತೇನೆ ಎಂದರು.
ಗುತ್ತಿಗೆದಾರರ ಮತ್ತು ತಮ್ಮ ಕಾರ್ಯಕರ್ತರ ಹಿತಾಸಕ್ತಿಗಾಗಿ ಶಾಸಕರು ಕೆಲಸ ಮಾಡುತಿದ್ದಾರೆ. ಅವರ ಎರಡು ಮುಕ್ಕಾಲು ವರ್ಷ ಅವಧಿ ಮುಗಿದಿದೆ. ಇನ್ನಿರುವ ಎರಡು ಕಾಲು ವರ್ಷ ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು. ಬೇಲೂರು ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಆಗಿಲ್ಲ. ಹೊಳೇ ಬೀದಿ ಸೇತುವೆ ಮತ್ತು ರಸ್ತೆ ಕೆಲಸ
ಮಾಡಿಸಿಲ್ಲ. ಎಲ್ಲ ಅಧಿಕಾರಿಗಳನ್ನು ಕಪಿ ಮುಷ್ಠಿಯಲ್ಲಿಟ್ಟು ಕೊಂಡಿದ್ದಾರೆ. ಬೇಲೂರು-ಅರಸೀಕೆರೆ ಶಾಸಕರಿಗೆ ಹಣ ಹೇಗೆ ತೆಗೆದುಕೊಳ್ಳ ಬೇಕೆಂಬ ಕಲೆ ಚನ್ನಾಗಿ ಗೊತ್ತಿದೆ. ಈಗ ರಿಯಲ್ ಎಸ್ಟೇಟ್ ಸಹ ಮಾಡುತಿದ್ದಾರೆ. ಪುರಸಭೆಯಲ್ಲಿ ಸದಸ್ಯರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ, ಚೇತನ್, ನಾಗೇಶ್, ನವೀನ್, ಕುಮಾರ್ ಇತರರು ಹಾಜರಿದ್ದರು.