ಬಕ್ರೀದ್ ಸಂದರ್ಭ ಗೋವುಗಳ ಅಕ್ರಮ ಸಾಗಾಣಿಕೆ ಹಾಗೂ ಅಕ್ರಮ ವಧೆ ತಡೆಯುವಂತೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಮುಖಂಡರು ಪೊಲೀಸರಿಗೆ ಮನವಿ ಸಲ್ಲಿಸಿದರು. ಪಿಐ ರೇವಣ್ಣ, ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಅಧ್ಯಕ್ಷ ಭರತ್, ಬಜರಂಗದಳ ಅಧ್ಯಕ್ಷ ಗುಂಡ, ಮುಖಂಡ ಸುಮನ್ ನವಿಲಹಳ್ಳಿ ಸೇರಿದಂತೆ ಇತರರಿದ್ದರು. 
ಹಾಸನ

ಗೋವುಗಳ ವಧೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಿ

ಎ. ಆರ್. ರಘುರಾಮ
ಬೇಲೂರು : ಬಕ್ರೀದ್ ಸಂದರ್ಭ ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ವಧೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಮುಖಂಡರು ಗುರುವಾರ ಬೇಲೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಅಧ್ಯಕ್ಷ ಭರತ್, ಬಕ್ರೀದ್ ಸಂದರ್ಭ ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಗೋವುಗಳ ಅಕ್ರಮ ವಧೆ, ಕಸಾಯಿಖಾನೆಗೆ ಸಾಗಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕುರ್ಬಾನಿ ಮಾಡುವುದು ನಡೆಯುತ್ತದೆ. ಹಾಗಾಗಿ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ದಾಳಿ ನಡೆಸಿ ಅಕ್ರಮವಾಗಿ ನಡೆಯಲಿರುವ ವಧೆ ತಡೆಯಬೇಕು.
ಖಾಲಿ ಜಾಗಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮ ವಧೆ ಹಾಗೂ ಸಾಗಾಟದಲ್ಲಿ ತೊಡಗುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬಕ್ರೀದ್ ಹಿನ್ನೆಲೆಯಲ್ಲಿ 24 ಗಂಟೆಗಳ ಗಸ್ತು ವ್ಯವಸ್ಥೆ ಕಲ್ಪಿಸಿ ವಾಹನ ತಪಾಸಣೆ ತೀವ್ರ ಗೊಳಿಸಬೇಕು. ಖಾಸಗಿ ವಾಹನಗಳು, ಕಂಟೈನರ್‌ಗಳು, ಹಾಲಿನ ಟ್ಯಾಂಕರ್‌ಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಅಕ್ರಮ ಸಾಗಾಟ ನಡೆಯುವ ಸಾಧ್ಯತೆ ಇದ್ದು ಕಟ್ಟುನಿಟ್ಟಿನ ನಿಗಾ ಇರಿಸಬೇಕು ಎಂದರು.
ಈಗಾಗಲೇ ಅಕ್ರಮ ಗೋ ಸಾಗಾಟ ಹಾಗೂ ವಧೆ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳ ಮೇಲೂ ವಿಶೇಷ ನಿಗಾ ವಹಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರೇವಣ್ಣ, ಹಿಂದೂಗಳಿಗೆ ಪೂಜನೀಯವಾಗಿರುವ ಗೋವಂಶ ರಕ್ಷಣೆಗೆ ಸಂವಿಧಾನದ ಚೌಕಟ್ಟಿನಲ್ಲಿ ಇರುವ ಕ್ರಮಗಳನ್ನು ವಹಿಸುವುದಾಗಿ ಭರವಸೆ ನೀಡಿದರು. ಪಿಐ ರೇವಣ್ಣ, ಬಜರಂಗದಳ ಅಧ್ಯಕ್ಷ ಗುಂಡ, ಮುಖಂಡ ಸುಮನ್ ನವಿಲಹಳ್ಳಿ ಸೇರಿದಂತೆ ಇತರರಿದ್ದರು.