ಬೇಲೂರು ಪಟ್ಟಣದ 20ನೇ ವಾರ್ಡಿನಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಕರ್ತವ್ಯ ನಿರ್ವಹಿಸುತ್ತಿದ್ದಾಗ ಮುಖ್ಯ ಶಿಕ್ಷಕಿ ಬಿ.ಎಲ್.ಪಾರ್ವತಿ ಕುಸಿದು ಬಿದ್ದು ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದರು. 
ಹಾಸನ

ಎಸ್‌ಐಆರ್ ವೇಳೆ ಬಿಎಲ್‌ಒ ಆರೋಗ್ಯದಲ್ಲಿ ಏರುಪೇರು

ಬೇಲೂರು: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯದಲ್ಲಿ ವೇಳೆ ಬಿಎಲ್‌ಒ ಒಬ್ಬರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಸ್ಥಳೀಯರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಬೇಲೂರು ಪಟ್ಟಣದ ಸರ್ಕಾರಿ ಹಿರಿಯ ಪೇಟೆ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಬಿ.ಎಲ್.ಪಾರ್ವತಿ ಅವರು ಬಿಎಲ್‌ಒ ಆಗಿ ಭಾನುವಾರ ನಿಯೋಜಿತವಾಗಿದ್ದ ಪಟ್ಟಣದ 20ನೇ ವಾರ್ಡಿನ ಚನ್ನೇಗೌಡರ ಬೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ತಲೆ ಸುತ್ತು ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಜತೆಗೆ ಚಿಕಿತ್ಸೆ ನೀಡಿದ ವೈದ್ಯರು ಶಿಕ್ಷಕಿಗೆ ಒಂದು ವಾರ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿ, ಮನೆಗೆ ಕಳುಹಿಸಿದ್ದಾರೆ.
ಮುಖ್ಯ ಶಿಕ್ಷಕಿ ಬಿ.ಎಲ್.ಪಾರ್ವತಿ ಮಾತನಾಡಿ, ನನಗೆ 60 ವರ್ಷ. ಪೇಟೆ ಪ್ರಾಥಮಿಕ ಪಾಠ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದು, ಬಿಎಲ್‌ಒ ಆಗಿ ನೇಮಿಸಲಾಗಿದೆ. ಅಲ್ಲದೆ 250 ಮಕ್ಕಳ ಜವಾಬ್ದಾರಿ ಹೊತ್ತಿದ್ದೇನೆ. ಆದರೂ ಎಸ್‌ಐಆರ್‌ಗೆ ನೇಮಿಸಿರುವುದರಿಂದ ಹೆಚ್ಚು ಒತ್ತಡ ಬೀಳುತ್ತಿದೆ. ಆದರೆ, ತಹಸೀಲ್ದಾರರು ಭಾನುವಾರವೂ ಕರ್ತವ್ಯ ನಿರ್ವಹಿಸಲು ತಿಳಿಸಿದ್ದರಿಂದ ಬೆಳಗ್ಗೆ 6 ಗಂಟೆಯಿಂದಲೇ 20ನೇ ವಾರ್ಡಿನ ಚನ್ನೇಗೌಡರ ಬೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಅನಾರೋಗ್ಯದ ನಡುವೆಯೂ ಎಸ್‌ಐಆರ್ ಕರ್ತವ್ಯಗಳನ್ನು ನಿರ್ವಹಿಸುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ಇರುವುದರಿಂದ ಕಷ್ಟಕರವಾಗಿದೆ. ಆರೋಗ್ಯ ಹಾಗೂ ಮಾನವೀಯತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದರು.