ಸ್ವಾತಂತ್ರ್ಯ ದಿನದ ಅಂಗವಾಗಿ ಆಲೂರಿನ ಭಾರತೀಯ ರೆಡ್ ಕ್ರಾಸ್, ರೋಟರಿ ಸಂಸ್ಥೆ, ಟ್ಯಾಕ್ಸಿ ಮಾಲೀಕರ ಸಂಘದಿಂದ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನಿಗಳಿಗೆ ಪ್ರಮಾಣ ಪತ್ರ ಹಾಗೂ ಆರೋಗ್ಯ ಕಿಟ್ ವಿತರಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಶ್ರೀಧರ ಕಂಕನವಾಡಿ, ತಾಪಂ ಇಒ ಸತೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಡಾ.ನಾರಾಯಣಸ್ವಾಮಿ. ಡಾ.ವಿಜಯ್, ರೆಡ್‌ಕ್ರಾಸ್ ಕಾರ್ಯದರ್ಶಿ ಧನಂಜಯ್ ಇದ್ದರು.  
ಹಾಸನ

70 ಜನರಿಂದ ಸ್ವಯಂಪ್ರೇರಿತ ರಕ್ತದಾನ

ಎ. ಆರ್. ರಘುರಾಮ

ಬೇಲೂರು :

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 70ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಈ ಸಂದರ್ಭ ರಕ್ತದಾನಿಗಳಿಗೆ ಪ್ರಮಾಣ ಪತ್ರ ಹಾಗೂ ಆರೋಗ್ಯ ಕಿಟ್ ವಿತರಿಸಿ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ರಕ್ತದಾನ ಅತ್ಯಂತ ಮಹತ್ವದ ಮಾನವೀಯ ಸೇವೆ ಎಂದರು. ಒಬ್ಬ ವ್ಯಕ್ತಿ ನೀಡುವ ರಕ್ತ ಮೂರು ಜನರ ಜೀವ ಉಳಿಸಲು ನೆರವಾಗುತ್ತದೆ. ಅಪಘಾತ, ಶಸ್ತ್ರ ಚಿಕಿತ್ಸೆ, ಹೆರಿಗೆ ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. 18 ವರ್ಷ ಮೇಲ್ಪಟ್ಟ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಂಡು ಜೀವ ಉಳಿಸುವ ಸೇವೆಯಲ್ಲಿ ಮಾದರಿಯಾಗಬೇಕು ಎಂದರು.
ಮಹತ್ತರ ಕಾರ್ಯ:
ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಬಿ. ಶಿವರಾಜ್ ಮಾತನಾಡಿ, ದಾನಗಳಲ್ಲಿ ರಕ್ತದಾನ ಅತ್ಯಂತ ಮಹತ್ತರವಾದದ್ದು. ತುರ್ತು ಸಂದರ್ಭ ರಕ್ತದ ಕೊರತೆ ಕಾಡುತ್ತಿರುವುದರಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ ಎಂದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ರಕ್ತದಾನ ಮಾಡುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಗಳನ್ನು ಆಯೋಜಿಸಲು ಮುಂದಾಗಬೇಕು. ಸಮಾಜಮುಖಿ ಕಾರ್ಯಗಳಿಗೆ ಅರ್ಥ ಕಲ್ಪಿಸಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವುದರ ಜತೆಗೆ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಸಮಾಜಮುಖಿ ಕಾರ್ಯಗಳಿಗೆ ಸಂಸ್ಥೆ ವೇದಿಕೆಯಾಗಬೇಕೆಂಬ ಉದ್ದೇಶದಿಂದ ರೆಡ್‌ಕ್ರಾಸ್ ಸಂಸ್ಥೆ ರಾಷ್ಟ್ರೀಯ ಹಬ್ಬ ಸೇರಿದಂತೆ ವಿವಿಧ ಸಂದರ್ಭ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.
ತಹಸೀಲ್ದಾರ್ ಶ್ರೀಧರ ಕಂಕನವಾಡಿ, ತಾಪಂ ಇಒ ಸತೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಡಾ.ನಾರಾಯಣಸ್ವಾಮಿ. ಡಾ.ವಿಜಯ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಧನಂಜಯ್, ಹಾಲಪ್ಪ, ಲೋಹಿತ್, ಗಣೇಶ್, ವೆಂಕಟೇಶ್, ಪದಾಧಿಕಾರಿಗಳಾದ ರಾಜಕುಮಾರ್, ಸುಲೇಮಾನ್, ರೋಟರಿ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಾಪಣ್ಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಇದ್ದರು.