ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಶಾಸಕ ಸ್ವರೂಪ್ ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್ ಇತರರಿದ್ದರು. 
ಹಾಸನ

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪ
  • ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
  • ಪರಿಹಾರಕ್ಕಾಗಿ ಇವರ ಪ್ರಯತ್ನವೇನು ಎಂದು ಪ್ರಶ್ನೆ
ಹಾಸನ: ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ. ಕೇಂದ್ರದಿಂದ ಪರಿಹಾರ ಪಡೆಯಲು ಏನು ಪ್ರಯತ್ನ ಮಾಡಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
ಶಾಸಕ ಸ್ವರೂಪ್ ಪ್ರಕಾಶ್ ಅವರ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಾಕಷ್ಟು ಆಸ್ತಿ ಹಾನಿ ಹಾಗೂ ಸಾವು ನೋವು ಸಂಭವಿಸಿದೆ. ರಾಜ್ಯ ಸರ್ಕಾರ ನೊಂದವರ ಕಷ್ಟ ಕೇಳಲು ಮುಂದಾಗಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಕಲ್ಬುರ್ಗಿ ಜಿಲ್ಲೆಯ ಪ್ರವಾಹ ಪೀಡಿತ ಜೀವರ್ಗಿ ಜಿಲ್ಲೆಗೆ ಜೆಡಿಎಸ್ ನಿಯೋಗ ಮೊದಲು ಭೇಟಿ ನೀಡಿ ಅಲ್ಲಿಯ ಜನತೆಗೆ ನೈತಿಕ ಸೈರ್ಯ ತುಂಬಿದೆ. ರಾಜ್ಯ ಸರ್ಕಾರದ ಮಂತ್ರಿಗಳು ಅಲ್ಲಿಗೆ ತೆರಳಿ ಜನರ ಕಷ್ಟ ಆಲಿಸುವ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ. 236 ಜನ ಸಾವಿಗೀಡಾಗಿದ್ದಾರೆ. 2,800ಕ್ಕೂ ಹೆಚ್ಚು ರೈತರ ಆಸ್ತಿ ಹಾನಿಯಾಗಿದೆ. ಸುಮಾರು 1 ಲಕ್ಷ 2 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರೈತರಿಗೆ 1 ಸಾವಿರ ಕೋಟಿ ರೂ. ಪರಿಹಾರ ಹಾಗೂ ಅಭಿವೃದ್ಧಿಗೆ 300 ಕೋಟಿ ರೂ.ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಉಳಿದ ಹಾನಿ ಸಂಬಂಧ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಜಿಲ್ಲಾ ಕೇಂದ್ರದಲ್ಲಿ ಹಾಸನದಲ್ಲಿ ಮೊದಲ ಬಾರಿಗೆ ಏರ್‌ಪೋರ್ಟ್ ನಿರ್ಮಾಣಕ್ಕೆ ದೇವೇಗೌಡರು ಯೋಜನೆ ರೂಪಿಸಿದರು. ದೇವೇಗೌಡರು ಜಾಗಬಿಡಿಸಲು ಬೂವನಹಳ್ಳಿಯ ಜನರ ಮನವೊಲಿಸಿದರು. ಹಾಸನದ ರೈತ ಬೆಳೆದ ಬೆಳೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು. ಆದರೆ, ಆ ಯೋಜನೆ ನನೆಗುದಿಗೆ ಬಿದ್ದಿದೆ. ದೇವೇಗೌಡರ ಮಗನಾಗಿ ಆ ಯೋಜನೆಯಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸಿಎಂ ಗಮನಕ್ಕೆ ಬರಲಿಲ್ಲವೆ?: ಮಾರ್ಚ್, ಏಪ್ರಿಲ್‌ನಲ್ಲಿ ಗೃಹಲಕ್ಷ್ಮೀ ಹಣ ನೀಡಿಲ್ಲ. ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಎಷ್ಟು ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಚಿವರ ರಾಜೀನಾಮೆ ಏಕೆ ಪಡೆದಿಲ್ಲ. ಹಣಕಾಸು ಸಚಿವರಾಗಿ ಸಾಕಷ್ಟು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ 5 ಸಾವಿರ ಕೋಟಿ. ರೂ.ಗಳ ಕುರಿತು ಗಮನಕ್ಕೆ ಬರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಚಿಲ್ಲರೆಗಳು ನನ್ನ ಬಗ್ಗೆ ಮಾತನಾಡುತ್ತಿವೆ: ಕೆಲವರು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎನ್ನುತ್ತಾರೆ. ನನ್ನಿಂದ ಬೆಳೆದ ಚಿಲ್ಲರೆಗಳೆಲ್ಲ ಕುಮಾರಸ್ವಾಮಿ ಏನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಜನ ನನಗೆ ಸರ್ಟಿಫೀಕೇಟ್ ಕೊಡುತ್ತಾರೆ ಇವರು ಕೊಡಬೇಕಿಲ್ಲ. ಕೇಂದ್ರದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಕಾರ್ಖಾನೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಜಾಗ ಒದಗಿಸಿಕೊಡಬೇಕು. ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಶಾಸಕರು ನಮ್ಮ ತಾಲೂಕಿನಲ್ಲಿ 300 ಎಕರೆ ಜಾಗ ನೀಡುತ್ತೇನೆ ಎಂದು ಹೇಳುತ್ತಾರೆ. ಶಾಸಕ ಹೇಗೆ ಜಾಗ ಕೊಡಲು ಬರುತ್ತದೆ ಎಂದು ಪ್ರಶ್ನಿಸಿದರು.
ಏಕಾಂತದಲ್ಲಿ ಕಾಲ ಕಳೆಯುವ ಆಸೆ: ಭಗವಂತನ ಇಚ್ಛೆಯಂತೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನರು ಕೃಷ್ಣದೇವರಾಯನ ಕಾಲ ಎಂದು ಮಾತನಾಡಿಕೊಳ್ಳುವಂತೆ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಎಲ್ಲ ಅನುಭವ ಆಗಿದೆ. ಎಲ್ಲ ರೀತಿಯ ಜನರನ್ನು ನೋಡಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಬಯಕೆಗಿಂತ ನೆಮ್ಮದಿ ಬೇಕಾಗಿದೆ. ಎಲ್ಲಾದರೂ ಕಾಡಿನ ಮಧ್ಯೆ ಹೋಗಿ ಏಕಾಂತವಾಗಿ ಜೀವಿಸುವ ಆಸೆ ಆಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿಪ್‌ನಲ್ಲಿ ನೀರು ತರುತ್ತಾರಾ?: ಎತ್ತಿನ ಹೊಳೆ ವಿಚಾರ ಚರ್ಚೆಗೆ ದೆಹಲಿಗೆ ಹೋಗುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ಎತ್ತಿನ ಹೊಳೆ ರಾಜ್ಯ ಸರ್ಕಾರದ ಹೊಣೆ. ದೆಹಲಿಗೆ ಹೋಗಿ ಸಭೆ ನಡೆಸಿ ರಾಮನಗರಕ್ಕೆ ಶಿಪ್‌ನಲ್ಲಿ ನೀರು ತರುತ್ತಾರಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
14 ಸಾವಿರ ಎಲೆಕ್ಟ್ರಿಕಲ್ ಬಸ್ ಖರೀದಿ: ಕೇಂದ್ರದ ಅನುದಾನದಿಂದ 14 ಸಾವಿರ ಎಲೆಕ್ಟ್ರಿಕಲ್ ಬಸ್ ಖರೀದಿಸಲಾಗುತ್ತಿದೆ. ಅದರಲ್ಲಿ 4,500 ಬಸ್‌ಗಳನ್ನು ಬೆಂಗಳೂರಿಗೆ ನೀಡಲಾಗುತ್ತಿದೆ. ತೆಲಂಗಾಣಕ್ಕೆ 2,200 ಬಸ್, ಅಲಹಬಾದ್‌ಗೆ 1 ಸಾವಿರ, ದೆಹಲಿಗೆ 2,800 ಬಸ್‌ನೀಡಲಾಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ವಿವರಿಸಿದರು.