ಗೊರೂರು ಹೇಮಾವತಿ ಜಲಾಶಯದ ಮುಖ್ಯಭಿಯಂತರರ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ಡಾ.ನವೀನ್ ಕುಮಾರ್, ಶಾಸಕ ಸಿಮೆಂಟ್ ಮಂಜು, ನಾರಾಯಣ ಗೌಡ ಇತರರಿದ್ದರು. 
ಹಾಸನ

ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಹೇಮೆಯ ನೀರಿಗಾಗಿ ಬೀದಿಗಿಳಿದ ಬಿಜೆಪಿ
  • ರೈತ ಮೋರ್ಚಾ ವತಿಯಿಂದ ಪ್ರತಿಭಟನೆ
  • ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಕೆ

ಹಾಸನ:

ಹೇಮಾವತಿ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿಗೆ ನೀರು ಕೊಡಬೇಕು ಹಾಗೂ ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ಮಂಗಳವಾರ ಹೇಮಾವತಿ ಮುಖ್ಯ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾಕಾರರು ನಮ್ಮ ನೀರು ನಮ್ಮ ಹಕ್ಕು, ನಮ್ಮ ನೀರು ನಮಗೆ ಇರಲಿ, ರೈತರನ್ನು ಉಳಿಸಿ ಎಂಬ ಘೋಷಣೆಗಳನ್ನು ಕೂಗಿದರು.

ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ.ನವೀನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲೇ ಮುಂಗಾರು ಕೈ ಕೊಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ ಇದಕ್ಕೆ ಪೂರಕವಾಗಿ ರೈತರ ಬಗ್ಗೆ ಕಾಳಜಿವಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ. ಒಬ್ಬರು ಖುರ್ಚಿ ಉಳಿಸಿಕೊಳ್ಳಬೇಕು, ಒಬ್ಬರು ಖುರ್ಚಿ ಪಡೆದುಕೊಳ್ಳಬೇಕು ಎಂಬ ಹೋರಾಟದಲ್ಲಿ ರಾಜ್ಯದ ರೈತರನ್ನು ನಿರ್ಲಕ್ಷೃ ಮಾಡಿದರು ಎಂದು ದೂರಿದರು.

ಮೊನ್ನೆ ಸರ್ವಪಕ್ಷ ಸಭೆ ಏರ್ಪಡಿಸುವ ಬದಲು ಏಪ್ರಿಲ್ ತಿಂಗಳಲ್ಲೇ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಂದೆ ಯಡಿಯೂರಪ್ಪ ಅವರ ಸರ್ಕಾರದ ಸಂದರ್ಭದಲ್ಲಿ ಬರದ ಸಲುವಾಗಿ ರೈತರ ಎರಡು ಹೆಕ್ಟೇರ್‌ಗೆ 56 ಸಾವಿರ ಪರಿಹಾರ ನೀಡಿತ್ತು. ೀಗ ರಾಜ್ಯ ಸರ್ಕಾರ ರೈತರಿಗೆ ಎರಡು ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರೂ.ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ತಮಿಳುನಾಡಿನಲ್ಲಿ ಮುಂಗಾರು, ಹಿಂಗಾರು ಎರಡು ಬೆಳೆ ಬೆಳೆಯುತ್ತಾರೆ. ಈ ವಿಚಾರವನ್ನು ಕಾವೇರಿ ನೀರು ನಿರ್ವಹಣಾ ಸಮಿತಿ ಮುಂದೆ ಮಂಡಿಸಬೇಕಿತ್ತು. ರಾಜ್ಯದ ರೈತರ ಪರವಾಗಿ ಅಂಕಿ-ಅಂಶಗಳ ಸಹಿತ ವಾದ ಮಂಡಿಸಬೇಕಿತ್ತು. ಅದನ್ನು ಬಿಟ್ಟು ಈಗ ಸಭೆಗಳನ್ನು ಮಾಡಿದರೆ ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆ ಬೆಳೆಯಬೇಡಿ ಎಂದು ಸರ್ಕಾರ ಈಗ ಹೇಳುತ್ತಿದೆ. ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಿದ್ದಾರೆ. ಬೆಳೆ ಬೆಳೆಯಲು ಸಾಲ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡುವವರು ಯಾರು? ರೈತರಿಗೆ ಆಗಿರುವ ಅನ್ಯಾಯವನ್ನು ಕೇಳುವವರು ಯಾರು ಎಂದು ಪ್ರಶ್ನಿಸಿದರು. ರೈತರಿಗೆ ಬೆಳೆ ಬೆಳೆಯದಂತೆ ನಿರ್ದೇಶನ ನೀಡುವ ಸರ್ಕಾರ ಪರಿಹಾರವನ್ನು ಕೂಡ ಘೋಷಿಸಲಿ ಎಂದು ಒತ್ತಾಯಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಾಸನದ ಜೀವ ನದಿ ಹೇಮಾವತಿಯಲ್ಲಿ ಸಂಪೂರ್ಣ ನೀರು ಭರ್ತಿಯಾಗಿಲ್ಲ. ಕಳೆದ ಬಾರಿ ಈ ಅವಧಿಯೊಳಗೆ ಎರಡು ಬಾರಿ ನೀರು ಭರ್ತಿಯಾಗಿತ್ತು. ಈ ಭಾಗದ ಮುಖ್ಯ ಬೆಳೆ ಆಲೂಗೆಡ್ಡೆ ರೈತರ ಪಾಲಿಗೆ ಈ ಬಾರಿ ಇಲ್ಲದಂತಾಗಿದೆ. ಏಕೈಕ ವಾಣಿಜ್ಯ ಬೆಳೆ ಜೋಳಕ್ಕೂ ಬಿಳಿಸುಳಿ ರೋಗ ಬಂದು ನಶಿಸಿಹೋಗುತ್ತಿದೆ. ಇರುವ ಬೆಳೆಯನ್ನು ಉಳಿಸಿಕೊಳ್ಳಲು ಹೇಮಾವತಿ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳಿಗೆ ನದಿ ಮೂಲಗಳಿಂದ ನೀರು ಹರಿಸುವ ಕೆಲಸ ಮಾಡಬೇಕು. ರೈತರು ಬೆಳೆದ ಬೆಳೆ ಒಣಗಿಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆದಷ್ಟು ಶೀಘ್ರ ಹೇಮಾವತಿ ಜಲಾಶಯದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರು ಬಿಡುಗಡೆಮಾಡಬೇಕು. ಜಿಲ್ಲೆಯ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಪ್ರಧಾನ ಕಾರ್ಯದರ್ಶಿ ನಟರಾಜು, ನಾಗೇಶ್ ಗೌಡ, ಉಪಾಧ್ಯಕ್ಷ ಮಹೇಶ್, ಕನಕರಾಜು, ಭರತ್, ನೇತ್ರಾವತಿ ಮಂಜುನಾಥ್, ಯೋಗೇಶ್ ಗೌಡ, ಗಿರೀಶ್, ಚಂದ್ರಶೇಖರ್ ಇತರರಿದ್ದರು.

ಸಿಎಂ ಡಿ.ಕೆ.ಶಿವಕುಮಾರ್‌ಗೆ ರಿಯಲ್ ಎಸ್ಟೇಟ್ ಮೇಲೆ ಹೆಚ್ಚಿನ ಆಸಕ್ತಿ ಇರುವುದರಿಂದ ರೈತರ ಕಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾನಸಿಕ ಸ್ಥೈರ್ಯತುಂಬದೆ ರೈತರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುವುದನ್ನು ಮರೆತು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು.

ಡಾ.ನವೀನ್ ಕುಮಾರ್
ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಮೋರ್ಚಾ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಮಿಳುನಾಡಿನ ಬಗ್ಗೆ ಬಹಳ ಅಭಿಮಾನ ಇದೆ. ನಮ್ಮ ರಾಜ್ಯದ ಜನರಿಗೆ ಬೆಳೆ ಬೆಳೆಯಲು ನೀರು ನೀಡದೆ ತಮಿಳುನಾಡಿಗೆ ನೀರು ಹರಿಸಲು ಮುಂದಾಗುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದ ಹಾಗೆ ಕಾಣುತ್ತಿಲ್ಲ. ರಾಜ್ಯದ ಜನರು ಜಲಾಶಯದ ನೀರು ಅವಲಂಬಿಸಿ ಬೆಳೆ ಬೆಳೆಯಬಾರದು ಎನ್ನುವುದಾರೆ ರಾಜ್ಯದ ರೈತರು ಮಣ್ಣು ತಿನ್ನಲು ಸಾಧ್ಯವೇ? ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.
ನಾರಾಯಣ ಗೌಡ
ಜಿಲ್ಲಾಧ್ಯಕ್ಷ ಬಿಜೆಪಿ ರೈತಮೋರ್ಚಾ