ಸಕಲೇಶಪುರ ತಾಲೂಕಿನ ಅರೆಕೆರೆ ಆರುಮಂದೆ ಗ್ರಾಮದ ಬಿಲ್ಲಸುಗ್ಗಿ ಮಹೋತ್ಸವ ಆದ್ದೂರಿಯಾಗಿ ನೆರವೇರಿತು. 
ಹಾಸನ

ಬಿಲ್ಲಸುಗ್ಗಿ ಮಹೋತ್ಸವ ವಿಜೃಂಭಣೆ

ಪ್ರಮುಖ ಮುಖ್ಯಾಂಶಗಳು

  • 12 ದಿನಗಳ ಕಾಲ ನಡೆಯುವ ಜಾತ್ರೆ
ಸಕಲೇಶಪುರ: ತಾಲೂಕಿನ ಅರೆಕೆರೆ ಆರುಮಂದೆ ಗ್ರಾಮದ ಬಿಲ್ಲಸುಗ್ಗಿ ಮಹೋತ್ಸವ ಶನಿವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಏಪ್ರಿಲ್ ಒಂದರಿಂದ ಆರಂಭವಾದ ಸುಗ್ಗಿ ಹಬ್ಬದ ಪ್ರಕ್ರಿಯೆ ನಿರಂತರ 12 ದಿನಗಳ ಕಾಲ ನಡೆಯುವ ಮೂಲಕ ಸೋಮವಾರ ಅಂತ್ಯಗೊಳ್ಳಲಿದೆ. ಹಲವು ಕಟ್ಟುಪಾಡುಗಳಿರುವ ಸುಗ್ಗಿಹಬ್ಬ ಏಪ್ರಿಲ್ ಒಂದರಿಂದ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಸುಗ್ಗಿ ವ್ಯಾಪ್ತಿಗೆ ಒಳಪಡುವ ಬ್ಯಾಕರವಳ್ಳಿ, ಅರೆಕೆರೆ, ಕಾಮನಹಳ್ಳಿ, ನಡಹಳ್ಳಿ, ಜಾನೇಕೆರೆ, ಸುಳ್ಳಕ್ಕಿ, ಬಾಗರವಳ್ಳಿ, ಕೊಣ್ಣರು, ಶಾಂತಪುರ, ಇಬ್ಬಡಿ ಗ್ರಾಮಗಳಲ್ಲಿ ಹಸಿರು ಕಡಿಯುವಂತಿಲ್ಲ, ಶುಭ ಸಮಾರಂಭ ಮಾಡುವಂತಿಲ್ಲ. ಕರಿದ ತಿಂಡಿ ಮಾಡುವಂತಿಲ್ಲ ಎಂಬ ಕಟ್ಟುಪಾಡು ಇದೆ. ಹಬ್ಬದ ಪ್ರಯುಕ್ತ ಸುಗ್ಗಿಕಟ್ಟೆಗೆ ಚಿಕ್ಕಮ್ಮ-ದೊಡ್ಡಮ್ಮ ದೇವಿಯರನ್ನು ಕರೆತಂದು ಉತ್ಸವ ನೆರವೇರಿಸಲಾಗುತ್ತದೆ.
ನೆನಕ್ಕಿ ಬನಕ್ಕೆ ದೊಡ್ಡಮ್ಮ ದೇವಿಯನ್ನು ಕರೆತಂದು ಪೂಜಿಸುವ ಪ್ರಕ್ರಿಯೆ ನಡೆದ ನಂತರ ದೊಡ್ಡಮ್ಮ ದೇವಿಯನ್ನು ಸುಗ್ಗಿ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ಮಲ್ಲು ಹಬ್ಬ ಆಚರಿಸಲಾಗುತ್ತದೆ.
ನಂತರ ಬಿಲ್ಲುಸುಗ್ಗಿ ಸಂಭ್ರಮಕ್ಕೆ ಅರೆಕೆರೆ, ಬ್ಯಾಕರವಳ್ಳಿ ಹಾಗೂ ಜಾನೇಕೆರೆ ಗ್ರಾಮಸ್ಥರನ್ನು ವಾದ್ಯದ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಸುಗ್ಗಿ ಕುಣಿತವೆ ಪ್ರಧಾನವಾಗಿರುವ ಉತ್ಸವದಲ್ಲಿ ವಯಸ್ಸಿನ ತಾರತಮ್ಯ ಇರುವುದಿಲ್ಲ. ರಾತ್ರಿಯಿಡಿ ಜನರು ಕುಣಿದು ಕುಪ್ಪಳಿಸಿದರು. ಬಣ್ಣಬಣ್ಣದ ಬಿಲ್ಲುಗಳು ಜನರ ಆಕರ್ಷಣೆಯಾಗಿದ್ದು ಮುಂಜಾನೆ ಕೆಂಡಹಾಯುವ ಮೂಲಕ ಬಿಲ್ಲುಸುಗ್ಗಿ ಮುಕ್ತಾಯಗೊಂಡಿದೆ. ಭಾನುವಾರ ಮಡೆಬನಕ್ಕೆ ದೊಡ್ಡಮ್ಮದೇವಿಯನ್ನು ಕರೆತಂದು ಅನ್ನ ಪ್ರಸಾದ ಮಾಡುವ ಮೂಲಕ ಮಡೆಪೂಜೆ ಮುಕ್ತಾಯಗೊಳಿಸಲಾಯಿತು.
ಸೋಮವಾರ ನಡೆಯಲಿರುವ ಹಗಲು ಸುಗ್ಗಿಯ ನಂತರ ಒಟ್ಟು 12 ದಿನಗಳ ಸುಗ್ಗಿ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.