ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಬಂದು ಯುವಕರನ್ನು ಚದುರಿಸಿದರು. 
ಹಾಸನ

ಯುವಕರ ಬೈಕ್ ವ್ಹೀಲಿಂಗ್ ಹುಚ್ಚಾಟ

ಪ್ರಮುಖ ಮುಖ್ಯಾಂಶಗಳು

  • ಯುವಕರ ಬೈಕ್ ವ್ಹೀಲಿಂಗ್ ಹುಚ್ಚಾಟ
  • ಸಾರ್ವಜನಿಕರಿಂದ ಪೊಲೀಸರಿಗೆ ದೂರು
ಹಾಸನ: ನಗರದ 80 ಅಡಿ ರಸ್ತೆ ಸಮೀಪದ ಮಸೀದಿ ಬಳಿ ಗುರುವಾರ ಬೆಳಗ್ಗೆ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾರೆ.
ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಏಳೆಂಟು ಯುವಕರು, ರಸ್ತೆಯ ಮಧ್ಯದಲ್ಲೇ ಬೈಕ್‌ಮೇಲೆ ಹುಚ್ಚು ಸಾಹಸ ಪ್ರದರ್ಶನ ಮಾಡುತ್ತಾ, ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.
ಈ ದೃಶ್ಯಗಳನ್ನು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.
ಈ ರೀತಿಯ ಚಟುವಟಿಕೆಗಳಿಂದ ಕೆಲಸಕ್ಕೆ ತೆರಳುತ್ತಿದ್ದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಬೆಳಗ್ಗೆ ವಾಕಿಂಗ್ ಮಾಡುವ ನಾಗರಿಕರು ಭಯಭೀತರಾಗಿದ್ದಾರೆ. ವ್ಹೀಲಿಂಗ್ ಮಾಡುವ ವೇಳೆ ಬೈಕ್ ನಿಯಂತ್ರಣ ತಪ್ಪಿದರೆ ಸಂಭವಿಸಬಹುದಾದ ಅಪಘಾತದಿಂದ ಅಮಾಯಕರ ಜೀವಕ್ಕೂ ಅಪಾಯ ಉಂಟಾಗಬಹುದೆಂಬ ಆತಂಕ ವ್ಯಕ್ತವಾಗಿದೆ. 80 ಅಡಿ ರಸ್ತೆ ಮಾತ್ರವಲ್ಲದೆ ಎಂ.ಜಿ. ರಸ್ತೆ, ರಿಂಗ್ ರಸ್ತೆ ಹಾಗೂ ನಗರದ ಹೊರವಲಯ ಪ್ರದೇಶಗಳಲ್ಲಿ ಸಹ ಇಂತಹ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ಸಾರ್ವಜನಿಕರು ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಬರುವುದನ್ನು ಗಮನಿಸಿದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಗುಂಪು ಗುಂಪಾಗಿ ವಿಡಿಯೋ ವೀಕ್ಷಿಸುತ್ತಿದ್ದವರನ್ನು ಪೊಲೀಸರು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.