ಚನ್ನರಾಯಪಟ್ಟಣದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಜಿ.ಎಸ್. ಶಂಕರಪ್ಪ, ಜನಾರ್ದನ್, ಸಿ.ಆರ್.ಸುರೇಶ್, ಲೋಕಿ, ಸಿ.ಡಿ.ನಾಗೇಂದ್ರ, ಎಸ್.ಎಂ.ನವೀನ್ ಕುಮಾರ್ ಇದ್ದರು. 
ಹಾಸನ

ಮನುಕುಲಕ್ಕೆ ದಾರಿ ದೀಪ ಭಗೀರಥ ಮಹರ್ಷಿ

ಚನ್ನರಾಯಪಟ್ಟಣ : ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ ಎಂದು ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ತಾಲೂಕು ಉಪ್ಪಾರ ಸಂಘದಿಂದ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಇಡೀ ಪ್ರಪಂಚದಲ್ಲಿಯೇ ವಿಶಿಷ್ಟತೆ ಹೊಂದಿದ್ದು, ಅನೇಕ ದಾರ್ಶನಿಕರು, ಸಾಧು ಸಂತರು, ಸತ್ಪುರುಷರನ್ನು ಪ್ರಪಂಚಕ್ಕೆ ಕೊಡುಗೆ ನೀಡಿದೆ. ಇವರೆಲ್ಲರೂ ಸಕಲ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಅಂಥ ಸತ್ಪುರುಷರಲ್ಲಿ ಭಗೀರಥ ಮಹರ್ಷಿ ಪ್ರಮುಖರು ಎಂದರು.
ದಾರ್ಶನಿಕರ ಸಾಧನೆ ಅವರು ನಡೆದು ಬಂದ ಕಷ್ಟಗಳ ಹಾದಿಯನ್ನು ತಿಳಿಸುತ್ತದೆ.
ಮಹಾರಾಜರಾಗಿದ್ದ ಭಗೀರಥರು ತ್ಯಾಗ, ಹಟ, ಛಲದಿಂದ ಸಾಧನೆ ಮಾಡಿದರು. ಪ್ರತಿಯೊಬ್ಬರೂ ತಮ್ಮಗುರಿ ಮುಟ್ಟಲು ಅಥವಾ ಸಾಧನೆ ಮಾಡಲು ಭಗೀರಥರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು. ಎಲ್ಲ ದಾರ್ಶನಿಕರ ಜೀವನ ಚರಿತ್ರೆ, ಜೀವನಗಾಥೆ, ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.
ಮಹರ್ಷಿ ಭಗೀರಥರು ತಮ್ಮ ತಪಸ್ಸಿ ಶಕ್ತಿಯಿಂದ ಗಂಗೆಯನ್ನು ಧರೆಗೆ ತರುವ ಮೂಲಕ ಮಹಾಪುರುಷರು ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಇಂಥ ಮಹಾಪುರುಷರ ಜಯಂತಿ ನಮ್ಮೆಲ್ಲರ ಜೀವನದ ಪ್ರೇರಣಾ ಶಕ್ತಿಯಾಗಿದೆ. ಭಗೀರಥ ಮಹರ್ಷಿಗಳ ಜಯಂತಿಯನ್ನು ಆಚರಣೆ ಮಾಡುವ ಜತೆಗೆ ಅವರ ಕೊಡುಗೆಯನ್ನು ಸ್ಮರಣೆ ಮಾಡಿಕೊಳ್ಳೋಣ. ಅವರು ಗಂಗೆಯನ್ನು ಧರೆಗೆ ತರಲು ಪಟ್ಟ ಪ್ರಯತ್ನ ಹೆಚ್ಚಿನದಾಗಿದೆ. ಇಂಥ ಮಹಾ ಪುರುಷರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಜಗತ್ತಿಗೆ ಹಾಗೂ ಮುಂದಿನ ಪೀಳಿಗೆಗೆ ಅವರ ತತ್ವ, ಆದರ್ಶಗಳನ್ನು ತಿಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ಜನಾರ್ದನ್, ಕಾರ್ಯದರ್ಶಿ ವಕೀಲ ನವೀನ್ ಕುಮಾರ್, ಕಂಟ್ರಾಕ್ಟರ್ ದೇವರಾಜು, ಕೆಡಿಪಿ ಸದಸ್ಯರ ಕಬ್ಬಾಳ್ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶ್ ಮೂರ್ತಿ, ಸಮಾಜದ ಮುಖಂಡರಾದ ಲೋಕಿ ಸಿ.ಡಿ.ನಾಗೇಂದ್ರ, ಸಿ.ಆರ್.ಸುರೇಶ್, ಸತೀಶ್, ಪ್ರವೀಣ್, ನಾಗೇಶ್, ಇ.ವಿ.ಮಂಜು, ಪಾಪಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.