ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅರಕಲಗೂಡಿನಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಜೆ. ವರುಣ್ ಮತ್ತು ರಚಿತಾ ಅವರನ್ನು ಗುರುವಾರ ಗೌರವಿಸಲಾಯಿತು. ಪ್ರಾಂಶುಪಾಲ ಮಹೇಶ್ ಹೊಡೆನೂರು, ದಶರಥ ಇತರರು ಇದ್ದರು.
ಅರಕಲಗೂಡು: ದ್ವಿತೀಯ ಪಿಯು ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ಪಟ್ಟಣದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಜೆ.ವರುಣ್ 12 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ ಎಂದು ಪ್ರಾಂಶುಪಾಲ ಮಹೇಶ್ ಹೊಡೆನೂರು ಹೇಳಿದರು.
ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪರೀಕ್ಷಾ ಫಲಿತಾಂಶ ಬಂದಾಗ ವರುಣ್‌ಗೆ 580 ಅಂಕಗಳು ದೊರೆತಿದ್ದವು. ಮರುಮೌಲ್ಯಮಾಪನಕ್ಕೆ ಹಾಕಿದಾಗ ಕನ್ನಡದಲ್ಲಿ 7 ಮತ್ತು ಇಂಗ್ಲಿಷ್ ಭಾಷೆಯಲ್ಲಿ 5 ಅಂಕಗಳು ಹೆಚ್ಚುವರಿಯಾಗಿ ಲಭಿಸಿದ್ದು ಒಟ್ಟು 592 (ಶೇ.99) ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ, ಜಿಲ್ಲಾ ಮಟ್ಟದಲ್ಲಿ ಐದನೇ ಹಾಗೂ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನಗಳಿಸಿದ್ದಾನೆ ಎಂದರು.
ವಾಣಿಜ್ಯ ವಿಭಾಗದಲ್ಲಿ ರಚಿತಾ ಶೇ 98(588) ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜು ಶೇ. 100 ಫಲಿತಾಂಶ ದಾಖಲಿಸಿದೆ ಎಂದು ತಿಳಿಸಿದರು. ಹೆಚ್ಚಿನ ಅಂಕಪಡೆದ ಜೆ. ವರುಣ್ ಮತ್ತು ರಚಿತಾ ಅವರನ್ನು ಗೌರವಿಸಲಾಯಿತು.