ಬೇಲೂರು ಪಟ್ಟಣದ ಪುರಸಭೆ ಕೊಠಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಬಸವರಾಜು ಶಿಗ್ಗಾವಿ, ಲೋಹಿತ್ ಇತರರಿದ್ದರು.
ಬೇಲೂರು: ಯುಗಾದಿ ಹಬ್ಬದಂದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಉಂಟಾಗುವ ವಾಹನಗಳ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹಾಗೂ ಬೇಲೂರಿಗೆ ಆಗಮಿಸುವ ಪ್ರವಾಸಿಗರು, ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ರಸ್ತೆ ಬದಿಯ ತರಕಾರಿ, ಹಣ್ಣು, ಹೂವು ವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಹೇಳಿದರು.
ಪಟ್ಟಣದ ಪುರಸಭೆ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಹಬ್ಬದ ದಿನಗಳಂದು ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲೇ ವ್ಯಾಪಾರ ವಹಿವಾಟಿಗೆ ವರ್ತಕರು ಮುಂದಾಗುವುದರಿಂದ ಬೇಲೂರಿಗೆ ಆಗಮಿಸುವ ವಾಹನಗಳು ದಟ್ಟಣೆಯಲ್ಲಿ ಸಿಲುಕಿ ಗಂಟೆ ಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ಪುರಸಭೆ ಮತ್ತು ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದನ್ನು ಮನಗಂಡು ವಾಹನಗಳ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರ ಸಹಕಾರದೊಂದಿಗೆ ಹಬ್ಬದ ದಿನಗಳಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೂ ಸಮಸ್ಯೆಯಾಗದಂತೆ ಎಲ್ಲ ಸಣ್ಣಪುಟ್ಟ ರಸ್ತೆಬದಿ ವ್ಯಾಪಾರಸ್ಥರನ್ನು ಪಟ್ಟಣದ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅಲ್ಲಿ ಅವರಿಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆಯನ್ನು ಪುರಸಭೆಯಿಂದ ಮಾಡಲಾಗಿದೆ. ವರ್ತಕರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಬೇಲೂರು ಪಟ್ಟಣದ ಕಿರಿದಾದ ಮುಖ್ಯ ರಸ್ತೆಗಳಿಂದಾಗಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕೆಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ರಸ್ತೆ ಕಡೆಗೆ ವಿಸ್ತರಿಸಿ ಜನರ ಗಮನ ಸೆಳೆಯುವ ಉದ್ದೇಶದಿಂದ ಮಾರಾಟ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರ ಜತೆಗೆ ಹಬ್ಬದ ಸಂದರ್ಭಗಳಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದ್ದು, ನಮ್ಮ ಎಷ್ಟೇ ಸಿಬ್ಬಂದಿ ಕೆಲಸ ಮಾಡಿದರೂ ಸಂಚಾರ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪೂರ್ವಭಾವಿಯಾಗಿ ಯೋಜನೆ ರೂಪಿಸಿ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಯುಗಾದಿ ಹಬ್ಬದ ದಿನ ಯಾವುದೇ ವ್ಯಾಪಾರಸ್ಥರು ರಸ್ತೆ ಮೇಲೆ ವ್ಯಾಪಾರ ನಡೆಸಬಾರದು. ಪುರಸಭೆ ಅಧ್ಯಕ್ಷರು ಸೂಚಿಸಿರುವಂತೆ ಜೂನಿಯರ್ ಕಾಲೇಜು ಮೈದಾನದಲ್ಲೇ ವ್ಯಾಪಾರ ಮಾಡಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಆರೋಗ್ಯಾಧಿಕಾರಿ ಲೋಹಿತ್, ಸದಸ್ಯೆ ಮೀನಾಕ್ಷಿ ವೆಂಕಟೇಶ್, ಸಿಬ್ಬಂದಿ ನಟರಾಜ್ ಇದ್ದರು.