ಪುರಸಭೆಯಿಂದ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸ ಮರು ಪರಿಶೀಲಿಸುವಂತೆ ಒತ್ತಾಯಿಸಿ ಕೆಆರ್‌ಎಸ್ ಪಕ್ಷದ ಮುಖಂಡರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ರಿಯಾಜ್ ಅಹಮ್ಮದ್, ಯೋಗೇಶ್, ಕುಸುಮಾ, ಶಶಿಕಲಾ ಇದ್ದರು. 
ಹಾಸನ

ಅಧ್ಯಯನ ಪ್ರವಾಸ ಪರಿಶೀಲಿಸಲು ಒತ್ತಾಯ

ಎ. ಆರ್. ರಘುರಾಮ

ಬೇಲೂರು :

ಪುರಸಭೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಅಧ್ಯಯನ ಪ್ರವಾಸ ಹೊರಟಿರುವ ಬಗ್ಗೆ ಮರು ಪರಿಶೀಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್)ಪಕ್ಷದ ಪದಾಧಿಕಾರಿಗಳು ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ಆದೇಶ ಲಿಂಗರಾಜು ಮಾತನಾಡಿ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಅನುಮೋದನೆಯಾದ ಹಾಗೂ ಸಾಮರ್ಥ್ಯ ಅಭಿವೃದ್ಧಿ ಘಟಕದಡಿ ಸಿದ್ಧಪಡಿಸಿರುವ ಮೈಕ್ರೋ ಪ್ಲಾನ್ ಕ್ರಿಯಾ ಯೋಜನೆಯನ್ವಯ ಸದಸ್ಯರು ಮತ್ತು ಅಧಿಕಾರಿಗಳು ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪುರಸಭೆ ಸದಸ್ಯರ ಅವಧಿ ಮುಕ್ತಾಯಗೊಳ್ಳಲು ಕೇವಲ ಒಂದು ತಿಂಗಳು ಬಾಕಿ ಇರುವ ಸಂದರ್ಭ ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರವಾಸಕ್ಕೆ ವೆಚ್ಚ ಮಾಡುವುದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಮಂಜಸವಲ್ಲ. ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಪ್ರಮುಖ ಉದ್ದೇಶ ಪಟ್ಟಣದ ಸ್ವಚ್ಛತೆ, ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಸ್ವಚ್ಛತಾ ವ್ಯವಸ್ಥೆಯ ಸುಧಾರಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಮಾಡುವುದಾಗಿದೆ. ಆದ್ದರಿಂದ ಅಧ್ಯಯನ ಪ್ರವಾಸಕ್ಕೆ ಮೀಸಲಿಡಲಾಗಿರುವ ಹಣವನ್ನು ಪಟ್ಟಣದ ಸ್ವಚ್ಛತೆ, ಕಸ ವಿಲೇವಾರಿ, ಸಾರ್ವಜನಿಕ ಶೌಚಗೃಹಗಳ ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸ ಬಹುದಲ್ಲೆವೇ ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಕ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಪುರಸಭೆ ಸದಸ್ಯರು, ನೌಕರರು ಸೇರಿದಂತೆ 26 ಜನ ಅಧ್ಯಯಾನ ಪ್ರವಾಸ ಕೈಗೊಂಡಿದ್ದು, ಕೆ.ಆರ್.ಎಸ್ ಪಕ್ಷದ ದೂರಿನ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೆಆರ್‌ಎಸ್ ಪಕ್ಷದ ತಾಲೂಕು ಪ್ರದಾನ ಕಾರ್ಯದರ್ಶಿ ರಿಯಾಜ್ ಅಹಮ್ಮದ್, ಕಾರ್ಯದರ್ಶಿಗಳಾದ ದೇವರಾಜು, ಯೋಗೇಶ್, ಕುಸುಮಾ, ಶಶಿಕಲಾ ಇದ್ದರು.