ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ 5ನೇ ದಿನದಲ್ಲಿ ಬೆಳ್ಳಿ ಮಂಟಪೋತ್ಸವವು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ 5ನೇ ದಿನದ ಬೆಳ್ಳಿ ಮಂಟಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.
ಬೆಳ್ಳಿ ಮಂಟಪೋತ್ಸವದ ಅಂಗವಾಗಿ ಶ್ರೀಚನ್ನಕೇಶವಸ್ವಾಮಿಗೆ ಸೇವಾರ್ಥದಾರರಾದ ಕೃಷ್ಣಶೆಟ್ಟಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಬೆಳ್ಳಿ ಮಂಟಪವನ್ನು ವಿವಿಧ ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿ ಮಂಗಳವಾದ್ಯದೊಂದಿಗೆ ದೇಗುಲದ ಅಷ್ಟ ಬೀದಿಗಳಲ್ಲಿ ದೇವರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಈ ದಿನದಂದು ವಿಶೇಷವಾಗಿ ಸೇವಾರ್ಥದಾರರು ಪಾಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಆಕರ್ಷಣಿಯವಾಗಿತ್ತು. ಇದೇ ಸಂದರ್ಭ ದೇಗುಲಕ್ಕೆ ಆಗಮಿಸಿದ ಭಕ್ತರು ಹಾಗೂ ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭರತನಾಟ್ಯ ಎಲ್ಲರ ಮನಸೂರೆಗೊಂಡಿತು.
ಬೆಳ್ಳಿ ಮಂಟಪೋತ್ಸವದ ಸಂದರ್ಭ ದೇಗುಲದ ಇಒ ಯೋಗೇಶ್, ಪುರಸಭೆ ಸದಸ್ಯ ಜಗದೀಶ್, ಸೇವಾರ್ಥದಾರ ಸತ್ಯನಾರಾಯಣಗುಪ್ತ, ಜಗದೀಶ್, ಪವನ್, ಪ್ರಜ್ವಲ್, ಶ್ರೇಯಸ್, ಅಡ್ಡೆಗಾರರು ಸೇರಿದಂತೆ ಭಕ್ತರಿದ್ದರು.