ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಕರೆಯಲಾಗಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಸಿಗ್ಗಾವಿ  
ಹಾಸನ

ದೇಗುಲದ ಸುತ್ತಲಿನ ಯಾವುದೇ ಮನೆ ಕೆಡವುವಂತಿಲ್ಲ

ಬೇಲೂರು: ಬೇಲೂರು ಶ್ರೀಚನ್ನಕೇಶವಸ್ವಾಮಿ ದೇಗುಲ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ದು, ಕೆಲವೇ ದಿನಗಳಲ್ಲಿ ರಥೋತ್ಸವ ಇದೆ. ಆದರೆ ದೇಗುಲ ಮುಂಭಾಗದಲ್ಲೇ ಹಳೇ ಮನೆ ಕೆಡವಿದ್ದರಿಂದ ಅಲ್ಲಿನ ಸ್ಥಳ ಪಾಳು ಕೊಂಪೆಯಾಗಿ ಕಾಣುತ್ತಿದ್ದು, ಅದನ್ನು ಮುಚ್ಚಲು ತಿಳಿಸಿ ಎಂದು ಸದಸ್ಯ ಆರ್.ಅಶೋಕ್ ಮುಖ್ಯಾಧಿಕಾರಿ ಬಸವರಾಜು ಸಿಗ್ಗಾವಿಗೆ ಆಗ್ರಹಿಸಿದರು.
ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ದೇಗುಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕಟ್ಟಡವಿರಲಿ ಕಟ್ಟುವುದು ಅಥವಾ ಕೆಡುವುದಾಗಲಿ ಮಾಡುವಂತಿಲ್ಲ, ಹಳೇ ಮನೆಗಳ ದುರಸ್ತಿನ್ನೂ ಮಾಡುವಂತಿಲ್ಲ. ಆದರೆ ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಹಳೆಯ ಕಟ್ಟಡವನ್ನು ರಥೋತ್ಸವಕ್ಕೆ ಕೆಲ ದಿನ ಇದ್ದಾಗಲೇ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಅದರಲ್ಲೂ ಈ ಮನೆ ಮುಂದೆಯೇ ಸಾವಿರಾರು ಜನರು ಓಡಾಡುತ್ತಾರೆ, ಉತ್ಸವಗಳು ತೆರಳುತ್ತವೆ. ಆದರೆ ಈಗ ಕೆಡವಿರುವುದರಿಂದ ಅದು ಪಾಳು ಕೊಂಪೆಯಂತೆ ಕಾಣುವ ಮೂಲಕ ಅಸಹ್ಯ ಹುಟ್ಟಿಸುತ್ತಿದೆ. ಅದರ ಮಾಲೀಕರೇನಾದರೂ ಪುರಸಭೆಯಿಂದ ಅನುಮತಿ ಪಡೆದಿದ್ದಾರೆಯೇ ಎಂಬ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.
ಪುರಸಭೆಗೆ ಸೇರಿದ 3 ವಾಣಿಜ್ಯ ಮಳಿಗೆಗಳು ನಮಗೆ ಸೇರಿದ್ದು ಎಂದು ಖಾಸಗಿ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿ ಅವರಂತೆ ಮಾಡಿಕೊಳ್ಳುತ್ತಾರೆ ಎಂದರೆ ಇದಕ್ಕೆ ಯಾರು ಹೊಣೆ. ಇಲ್ಲಿ ಅಧಿಕಾರಿಗಳ ನಿರ್ಲಕ್ಷೃ ಹಾಗೂ ಶಾಮೀಲಾಗಿರುವುದೇ ಇದಕ್ಕೆಲ್ಲ ಕಾರಣ. ತಕ್ಷಣವೆ ನ್ಯಾಯಾಲಯಕ್ಕೆ ರಿಟ್ ಪಿಟೀಷನ್ ಹಾಕಿ ಮಳಿಗೆಗಳನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
25 ವರ್ಷದಿಂದ ಬಡವರಿಗೆ ನಿವೇಶನಗಳನ್ನು ಹಂಚಲು ಸಾಧ್ಯವಾಗಿಲ್ಲ. ಇದಕ್ಕೆ ಯಾರು ಕಾರಣ. ಕೆಲವೇ ದಿನಗಳಿರುವ ಶ್ರೀಚನ್ನಕೇಶವಸ್ವಾಮಿ ರಥೋತ್ಸವದ ಸಂದರ್ಭ ವಿಷ್ಣುಸಮುದ್ರ ಕಲ್ಯಾಣಿಗೆ ದೇವರನ್ನು ಕರೆದುಕೊಂಡು ಹೋಗಿ ಬರಲು ಮತ್ತು ಭಕ್ತರು ಹರಕೆ ಸಲ್ಲಿಸಲು ಕೆರೆ ಬೀದಿಯಲ್ಲಿ ತೆರಳುತ್ತಾರೆ. ಆದರೆ ಈ ಬೀದಿಯಲ್ಲಿ ಗುಂಡಿ ಬಿದ್ದು ಓಡಾಡದಂತಾಗಿದ್ದು, ಅಧಿಕಾರಿಗಳು ಗಮನಹರಿಸಿ ಗುಂಡಿ ಮುಚ್ಚಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಆ ಮನೆಗೆ 100 ವರ್ಷ ಪೂರೈಸಿದ್ದು ಗೋಡೆಗಳು ಮಣ್ಣಿನಿಂದ ಕೂಡಿವೆ. ರಥೋತ್ಸವದ ಸಂದರ್ಭ ಯಾರಾದರು ಅದರ ತಳಕ್ಕೆ ಹೋದ ಸಂದರ್ಭ ಅನಾಹುತವಾದರೆ ಯಾರು ಹೊಣೆ? ಆದ್ದರಿಂದ ಅದನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಾತನಾಡಿ, ಈಗಾಗಲೇ ಕಟ್ಟಡದ ಮಾಲೀಕರಿಗೆ ಮನೆ ಕೆಡುವುತ್ತಿರುವುದಕ್ಕೆ ಅನುಮತಿ ಪಡೆಯದ ಕಾರಣ ನೋಟಿಸ್ ನೀಡಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ಜಗದೀಶ್ ಮಾತನಾಡಿ, ಬೇಲೂರು ಪಟ್ಟಣದಲ್ಲಿ ನಡೆಯುವ ಸಂತೆ ಸುಂಕದ ಟೆಂಡರ್‌ನಲ್ಲಿ ಯಾರು ಭಾಗವಹಿಸಿ ಕೂಗಿದ್ದಾರೋ ಅವರಿಗೆ ಅಗ್ರಿಮೆಂಟ್ ಮಾಡಿಕೊಡಿ. ಅದನ್ನು ಬಿಟ್ಟು ಸುಮ್ಮನೇ ಅದೇ ವಿಷಯವನ್ನು ಸಭೆಗೆ ಏಕೆ ತರುತ್ತೀರಿ. ಪದೇ ಪದೆ ಅದೇ ವಿಷಯ ಮಾತಾಡೋಕೆ ಇಲ್ಲಿಗೆ ಬರಬೇಕಾ? ಹಾಗಿದ್ದರೆ ವಾಣಿಜ್ಯ ಮಳಿಗೆಗಳನ್ನು ಏಕೆ ಮರು ಟೆಂಡರ್ ಮಾಡದೆ ಅಗ್ರಿಮೆಂಟ್ ಮಾಡಿ ಕೊಟ್ಟಿದ್ದೀರಿ, ಅದೇ ರೀತಿ ಇದನ್ನು ಮಾಡಿಕೊಡಿ ಎಂದರು.
ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಕಳೆದ ಸಾಕಷ್ಟು ವರ್ಷಗಳಿಂದ ಸಂತೆ ಸುಂಕದಿಂದ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ ಈ ಬಾರಿ 4.65 ಲಕ್ಷ ರೂ. ಕಡಿಮೆಗೆ ಟೆಂಡರ್ ಆಗಿದ್ದು ಇದು ಪುರಸಭೆಗೆ ಕಡಿಮೆ ಆದಾಯ ಬಂದಂತಾಗುತ್ತದೆ. ಆದ್ದರಿಂದ ಆದ್ದರಿಂದ ಪುರಸಭೆಗೆ ಹೆಚ್ಚಿನ ಆದಾಯ ಬರುವಂತೆ ಟೆಂಡರ್ ಮಾಡಿದರೆ ಒಳಿತು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಸಿಗ್ಗಾವಿ ಮಾತನಾಡಿ, ಕಳೆದ ಬಾರಿಯ ಸಂತೆ ಸುಂಕದ ಟೆಂಡರ್ 19.5 ಲಕ್ಷ ರೂ.ಗೆ ಆಗಿತ್ತು. ಆದರೆ ಈ ಬಾರಿ ಏಕಾಏಕಿ ಕಡಿಮೆಯಾಗಿದ್ದು ಇದರಿಂದ ಪುರಸಭೆಗೆ ನಷ್ಟವಾಗುತ್ತದೆ. ಆದ್ದರಿಂದಲೇ ಈ ವಿಷಯವಾಗಿ ಸಭೆಗೆ ತಂದಿದ್ದೇವೆ. ವಾರ್ಷಿಕ ಹರಾಜಾದ್ದರಿಂದ ಮರು ಟೆಂಡರ್ ಮಾಡಿದರೆ ಹೆಚ್ಚಿನ ಆದಾಯ ಕ್ರೋಡೀಕರಿಸಲು ಮುಂದಾಗಿದ್ದೇವೆ. ಅಲ್ಲದೆ ಕಳೆದ ವರ್ಷ ಟೆಂಡರ್ ಕೂಗಿದವರು ಇನ್ನೂ ಬಾಕಿ ಹಣ ಕಟ್ಟ ಬೇಕಿರುವುದರಿಂದ ಅದನ್ನು ಮುಲಾಜಿಲ್ಲದೆ ವಸೂಲು ಮಾಡಲಾಗುವುದು ಎಂದರು.