ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ದಿನ ಜರುಗಿದ ಶಾರದಾಲಂಕಾರೋತ್ಸವವನ್ನು ಹೊತ್ತು ಮೆರವಣಿಗೆಯಲ್ಲಿ ತೆರಳುತ್ತಿರುವುದು.
ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವದವರೆಗೂ ನಡೆಯುವ ದೇವರ ಉತ್ಸವಗಳಿಗೆ ಸೋಮವಾರ ರಾತ್ರಿ ಶಾರದಾಲಂಕಾರೋತ್ಸವದೊಂದಿಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಉತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕಾಗಿ ಪ್ರಾರಂಭಿಸಲಾದ ಉತ್ಸವಗಳಲ್ಲಿ ಪ್ರತಿನಿತ್ಯ ದೇಗುಲದ ಸಂಪ್ರದಾಯದಂತೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿದ್ದು, ಇದರ ಪ್ರಥಮ ದಿನದಂದು ಅನುಜ್ಞೆ, ಮೃತ್ತಿಕಾ ಸಂಗ್ರಹ, ಅಂಕುರಾರ್ಪಣೆ, ಆಧಿವಾಸರ ರಕ್ಷಾ ಬಂಧನ ಮುಂತಾದ ಪೂರ್ವಕ ವಿಧಿಗಳನ್ನು ಅರ್ಚಕರು ಶಾಸ್ತ್ರೋಕ್ತವಾಗಿ ನೆರವೇರಿಸಿದ ನಂತರ ಶಾರದಾಲಂಕಾರೋತ್ಸದ ಅಂಗವಾಗಿ ದೇವರನ್ನು ವಿಶೇಷವಾದ ಪುಷ್ಪಗಳಿಂದ ಅಲಂಕರಿಸಿ ಭಜನೆ, ವೇದಘೋಷ ಮತ್ತು ಮಂಗಳವಾದ್ಯಗಳೊಂದಿಗೆ ದೇಗುಲದ ಬೀದಿಗಳಲ್ಲೂ ಮೆರವಣಿಗೆ ನಡೆಸಿದ ನಂತರ ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು.
ದೇಗುಲದ ಇಒ ಯೋಗೀಶ್, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಮಾಜಿ ಧರ್ಮದರ್ಶಿ ಯುಟಿ ಕೇಶವಮೂರ್ತಿ ಸೇರಿದಂತೆ ಅಡ್ಡೆಗಾರರು ಹಾಗೂ ಭಕ್ತರಿದ್ದರು.