ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಮಂತ್ರ ದೇವತೆ ದೈವದ ವಾರ್ಷಿಕ ಸಿರಿ ಸಿಂಗಾರ ಕೋಲ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಬೇಲೂರು: ತಾಲೂಕಿನ ಸೋಂಪುರ ಗ್ರಾಮದಲ್ಲಿ ಶ್ರೀಮಂತ್ರ ದೇವತೆ ದೈವದ ವಾರ್ಷಿಕ ಸಿರಿ ಸಿಂಗಾರ ಕೋಲ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು
ಗ್ರಾಮದಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು, ದೇವರಿಗೆ ಪುಷ್ಪಾಲಂಕಾರಗಳು ಹಾಗೂ ಸಂಪ್ರದಾಯ ಬದ್ಧ ದೈವ ಆರಾಧನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸೋಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸಿದರು.
ದೈವದ ಕೋಲ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ ಸಿರಿ ಸಿಂಗಾರ ಕೋಲ ನಡೆಯಿತು. ದೈವವನ್ನು ಸಿಂಗರಿಸಿ ಭಕ್ತರಿಗೆ ದರ್ಶನ ನೀಡಲಾಯಿತು. ಈ ಸಂದರ್ಭ ಭಕ್ತರು ಭಕ್ತಿ ಭಾವದಿಂದ ಕೋಲಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರಿಗೆ ಸಿರಿಮುಡಿ, ಗಂಧ ಪ್ರಸಾದ ವಿತರಿಸಲಾಯಿತು. ಕೋಲದ ಪೂಜಾ ಮಹೋತ್ಸವವನ್ನು ಗಣೇಶ ಪೂಜಾರಿ, ವಿಶಾಲ ಹಾಗೂ ಕುಟುಂಬಸ್ಥರು ಆಯೋಜಿಸಿದ್ದರು.