ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಶಾರದಾ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಬೇಲೂರು : ಓದು ಉತ್ತಮ ಬದುಕನ್ನು ರೂಪಿಸುವಂತಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾ.ನ.ಮಂಜೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಹೆಬ್ಬಾಳು ಗ್ರಾಮದ ಶಾರದಾ ಕಾನ್ವೆಂಟ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ದೇಶಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ನಮ್ಮ ದೇಶದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಓದುವ ವಿಷಯಗಳು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿಲ್ಲ. ಹೀಗಾಗಿ ಪ್ರತಿ ಗ್ರಾಮದಲ್ಲೂ ನೌಕರಿಗಾಗಿ ಓದಿದ ಅನೇಕರು ಕಟ್ಟೆಯ ಮೇಲೆ ಕೈಕಟ್ಟಿ ಕುಳಿತು ಕೊಳ್ಳುವಂತಾಗಿದೆ. ಜತೆಗೆ ಸರ್ಕಾರಗಳು ಗ್ರಾಮ ಭಾರತದ ಬದುಕನ್ನು ಶ್ರೀಮಂತಗೊಳಿಸುವ ಬಗ್ಗೆ ಚಿಂತಿಸಬೇಕಿದೆ. ಆಗ ಮಾತ್ರ ಸಮಗ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಸಹ ಪೈಪೋಟಿಗೆ ಇಳಿದಿದ್ದು ಶಿಕ್ಷಕರು ಓದಿನ ಜತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುವತ್ತಲೂ ಮುಂದಾಗಬೇಕು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ನಾಗರಿಕ ಸಮಾಜದಲ್ಲಿ ಅಕ್ಷರ ಜ್ಞಾನದೊಂದಿಗೆ ಸಂಸ್ಕಾರಯುತ ಶಿಕ್ಷಣ ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿ ನೈತಿಕತೆ, ಗೌರವ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಿ ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುತ್ತದೆ. ಸಂಸ್ಕಾರವಿರುವ ಶಿಕ್ಷಣವು ಮಕ್ಕಳ ವ್ಯಕ್ತಿತ್ವ ವಿಕಸನ, ದುಶ್ಚಟಗಳಿಂದ ದೂರವಿರಿಸಲು ಸಹಕಾರಿಯಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಎಚ್.ಎಸ್.ಮಂಜುನಾಥ ಮಾತನಾಡಿ, ಕುಟುಂಬ ಪರಿಸರವು ಮಗುವಿನ ಮೊದಲ ಪಾಠಶಾಲೆಯಾಗಿದ್ದು, ಅಲ್ಲಿ ಮಗು ಪ್ರೀತಿ, ಗೌರವ, ಪ್ರಾಮಾಣಿಕತೆ, ಜವಾಬ್ದಾರಿ, ಹಂಚಿಕೊಳ್ಳುವುದು ಮತ್ತು ಹಿರಿಯರನ್ನು ಗೌರವಿಸುವುದು, ಶಿಸ್ತು, ಕರುಣೆ, ಧೈರ್ಯ ಮತ್ತು ಸಂಸ್ಕೃತಿ-ಸಂಪ್ರದಾಯಗಳನ್ನು ಪಾಲಿಸುವುದನ್ನು ಮಗು ಕುಟುಂಬದ ಮೂಲಕ ರೂಢಿಸಿಕೊಳ್ಳುತ್ತದೆ. ಪಾಲಕರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದರು.
ಶಾರದಾ ಕಾನ್ವೆಂಟ್ ಸಂಸ್ಥೆ ಅಧ್ಯಕ್ಷೆ ವಿನೋದಾ, ಕಾರ್ಯದರ್ಶಿ ಚನ್ನಕೇಶವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಧ್ರುವಕುಮಾರಿ, ಗ್ರಂಥಪಾಲಕ ಮಂಜೇಗೌಡ, ಮುಖ್ಯಶಿಕ್ಷಕ ಶಿವಶಂಕರ್, ಶಿಕ್ಷಕ ಕಾಳೇಗೌಡ, ಮುಖಂಡ ಭುವನೇಶ್ ಮತ್ತಿತರರಿದ್ದರು.
ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.