ಲಯನ್ಸ್ ಕ್ಲಬ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಲಯನ್ಸ್ ಪದಾಧಿಕಾರಿಗಳಿಗೆ ಮಹಿಳೆಯರು ರಾಖಿ ಕಟ್ಟಿದರು. 
ಹಾಸನ

ಸಹೋದರತ್ವಕ್ಕೆ ರಕ್ಷಾ ಬಂಧನ ಸಹಕಾರಿ

ಬೇಲೂರು:

ರಕ್ಷಾ ಬಂಧನವು ಕೇವಲ ಅಣ್ಣ-ತಂಗಿಯರ ನಡುವಿನ ಬಾಂಧವ್ಯ ಪ್ರತಿಬಿಂಬಿಸುವ ಹಬ್ಬವಲ್ಲ. ಸಮಾಜದಲ್ಲಿ ಸಹೋದರತ್ವ, ಪ್ರೀತಿ, ಸೌಹಾರ್ದತೆ ಹಾಗೂ ಗೌರವ ಬೆಳೆಸುವ ಮಹತ್ವದ ಆಚರಣೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಮುಖ್ತಿಯಾರ್ ಅಹಮದ್ ಹೇಳಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಂದಿಗೆ ರಕ್ಷಾ ಬಂಧನ ಅಂಗವಾಗಿ ಲಯನ್ಸ್ ಕ್ಲಬ್‌ನಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರೊಂದಿಗೆ ಬೆರೆತು ರಕ್ಷಾ ಬಂಧನ ಆಚರಿಸುವ ಮೂಲಕ ಹಬ್ಬದ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಯಾಣಿಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಂತಸದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮವಾಗಿ ಸ್ಪಂದಿಸಿರುವುದು ಸಂತಸ ತಂದಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಪೂವಯ್ಯ ಮಾತನಾಡಿ, ರಕ್ಷಣೆ ಮತ್ತು ಬಂಧನದ ಸಂಕೇತವಾಗಿರುವ ರಕ್ಷಾ ಬಂಧನ ದೇಶದ ವಿಶಿಷ್ಟ ಹಬ್ಬವಾಗಿದ್ದು, ಈ ಆಚರಣೆಯ ಮೂಲಕ ಸಹೋದರ-ಸಹೋದರಿಯರ ನಡುವಿನ ಆತ್ಮೀಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು. ರಕ್ಷಾ ಬಂಧನವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ನಮ್ಮ ಸಂಸ್ಕೃತಿಯಾಗಿ ಬೆಳೆಯುವಂತೆ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಮುಜುಗರವಾದರೂ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಸಮಾಜದ ಏಳಿಗೆಗಾಗಿ ಇಂತಹ ಸೌಹಾರ್ದಯುತ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು. ಅಲ್ಲದೆ ಮುಸ್ಲಿಂ ಸಮುದಾಯದ ಸಹೋದರಿಯೊಬ್ಬರು ಸಂತೋಷದಿಂದ ರಾಖಿ ಕಟ್ಟಿದ್ದು ಕಾರ್ಯಕ್ರಮದ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದರು.
ಲಯನ್ಸ್ ಕ್ಲಬ್‌ನ ಡಾ.ಚಂದ್ರಮೌಳಿ, ಹೆಬ್ಬಾಳು ಹಾಲಪ್ಪ, ಸುರೇಶ್, ಅಬ್ದುಲ್ ಲತೀಫ್, ಹೇಮಂತ್, ಸಂತೋಷ್ ರಾವ್, ಕುಮಾರ್ ಹಾಗೂ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ಸಾರ್ವಜನಿಕರಿದ್ದರು.