ಬೇಲೂರಿನ ಅರೇಹಳ್ಳಿ ಹೀರಾ ಸೆಂಟರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ಮುಜೀಬುರ್ ರೆಹಮಾನ್, ಜಮಾಅತೆಯ ಹೋಬಳಿ ಘಟಕದ ಅಧ್ಯಕ್ಷ ಇಜಾರ್ ಅಸರ್ ಉಮ್ರಿ ಹಾಗೂ ಜಮಾಅತೆಯ ವಿವಿಧ ಪದಾಧಿಕಾರಿಗಳಿದ್ದರು. 
ಹಾಸನ

ಮಾನವ ಕುಲದ ಏಕತೆ ಸಾರಿದ ಪ್ರವಾದಿ ಮುಹಮ್ಮದ್

ಬೇಲೂರು:

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಆ.26 ರಿಂದ ಸೆ.6 ವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅರೇಹಳ್ಳಿ ಘಟಕದ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ತಿಳಿಸಿದರು.

ತಾಲೂಕಿನ ಅರೇಹಳ್ಳಿ ಪಟ್ಟಣದ ಹಿರಾ ಸೆಂಟರ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾನವ ಮನಸ್ಸಿನ ಕೃಷಿಕ ಮಹದೋದ್ದೇಶದ ಪ್ರವಾದಿ ಮುಹಮ್ಮದ್ ಹಾಗೂ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಘನತೆ ಹಾಗೂ ಮಾನವಕುಲದ ಏಕತೆಯ ತತ್ವಗಳ ಮೇಲೆ ಸ್ಥಾಪಿತವಾಗಿದೆ. ಜನರ ಮನಸ್ಸನ್ನು ಸಂಸ್ಕರಿಸುವ ಮೂಲಕ ಅವರ ನೈತಿಕತೆ ಹಾಗೂ ಚಾರಿತ್ರ್ಯವನ್ನು ಶುದ್ಧೀಕರಿಸಿ ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗೆ ಕಾರಣರಾದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು ಎಂದರು.
ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಭಿಕ್ಷೆ ಮತ್ತು ನಿರ್ಭಯ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಕನ್ನಡದ ಜನತೆಗೆ ಪರಿಚಯಿಸುವ ಉದ್ದೇಶದಿಂದ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮಗಳು, ಚರ್ಚಾ ಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜ ಸೇವಾ ಚಟುವಟಿಕೆಗಳು ಮತ್ತು ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜತೆಗೆ ಅರೇಹಳ್ಳಿಯ ಹಿರಾ ಸೆಂಟರ್‌ನಲ್ಲಿ ಸೆ.1 ರಂದು ಸೀರತ್ ಪ್ರವಚನ ನಡೆಯಲಿದ್ದು, ಎಲ್ಲ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಮಾಅತೆಯ ಹೋಬಳಿ ಘಟಕದ ಅಧ್ಯಕ್ಷ ಇಜಾರ್ ಅಸರ್ ಉಮ್ರಿ ಹಾಗೂ ಜಮಾಅತೆಯ ವಿವಿಧ ಪದಾಧಿಕಾರಿಗಳಿದ್ದರು.