- ಬೇಲೂರು-ಹಾಸನ ಹೆದ್ದಾರಿ ಅಭಿವೃದ್ಧಿ ನಿರೀಕ್ಷೆ ಹುಸಿ
- ಕಾಮಗಾರಿಗೆ ಎದುರಾಗಿರುವ ವಿಘ್ನಗಳಿಗೆ ಕಾಣದ ಪರಿಹಾರ
- ಭೂಮಿ ಬೆಲೆ ದುಪ್ಪಟ್ಟಿನಿಂದ ಭೂಸ್ವಾಧೀನಕ್ಕೆ ಅನುದಾನದ ಕೊರತೆ
ಹಾಸನ: ಬೇಲೂರು-ಹಾಸನ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಎದುರಾಗಿರುವ ವಿಘ್ನಕ್ಕೆ ಪರಿಹಾರ ಕಾಣದೆ ಪ್ರಯಾಣಿಕರ ಬಹುದಿನಗಳ ನಿರೀಕ್ಷೆ ಹುಸಿಯಾಗಿದೆ.
ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕೆಂದು ದಶಕಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಚತುಷ್ಪಥ ರಸ್ತೆ ನಿರ್ಮಾಣಕ್ಕೆ 635 ಕೋಟಿ ರೂ. ಮಂಜೂರಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ 109 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಹಾಸನ ನಗರಸಭೆಯು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಭೂಮಿಯ ಬೆಲೆ ದುಪ್ಪಟ್ಟಾಗಿ ಭೂಸ್ವಾಧೀನಕ್ಕೆ ಇನ್ನೂ 100 ಕೋಟಿ ರೂ. ಅನುದಾನದ ಅಗತ್ಯವಿದೆ. ಪರಿಷ್ಕೃತ ಅಂದಾಜು ಮೊತ್ತ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹತ್ತಾರು ಬಾರಿ ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆಯಾದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ರಸ್ತೆ ವಿಸ್ತರಣೆಗೆ ಎರಡು ಬದಿಯಲ್ಲಿರುವ ಬೃಹತ್ ಗಾತ್ರದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಆದರೆ, ಭೂಸ್ವಾಧೀನಕ್ಕೆ ಅನುದಾನದ ಅಲಭ್ಯತೆ ಕಾಮಗಾರಿಗೆ ಗ್ರಹಣ ಹಿಡಿಯುವಂತೆ ಮಾಡಿದೆ.
ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ರಾಜ್ಯ ಅಲ್ಲದೆ ಹೊರ ದೇಶಗಳಿಂದಲೂ ಪ್ರವಾಸಿಗರು ಬರುವುದರಿಂದ ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲೇ ಬರಬೇಕಿದೆ. ಹಾಸನದವರೆಗೆ ಸುಸಜ್ಜಿತ ರಸ್ತೆ ವ್ಯವಸ್ಥೆ ಇದೆಯಾದರೂ ಉಳಿದ 40 ಕಿ.ಮೀ. ಪ್ರಯಾಣ ಸಂಕಷ್ಟ ತಂದೊಡುತ್ತಿದೆ. ದಿನೇ ದಿನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ವಾಹನ ಸಂಚಾರ ಹೆಚ್ಚಾಗಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪ್ರವಾಸಿಗರು ಹಾಗೂ ಸವಾರರು ಪರದಾಡುವಂತಾಗಿದೆ.
ಹಾಸನದಿಂದ ಹೊಳೆನರಸೀಪುರವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಂದುವರಿದು ಬೇಲೂರಿನವರೆಗೆ ಕಾಮಗಾರಿ ವಿಸ್ತರಿಸಬೇಕಿದೆ. ಬೇಲೂರು ಮೂಲಕ ಚಿಕ್ಕಮಗಳೂರು, ಚಾರ್ಮಾಡಿ ಘಾಟ್ ಮಾರ್ಗವಾಗಿ ಮಂಗಳೂರು ಭಾಗಕ್ಕೆ ತೆರಳುವ ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿವೆ. ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಈಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿ ಬಿದ್ದ ಕಡೆ ತೇಪೆ ಹಾಕಲಾಗಿದೆ. ಕಿರಿದಾದ ರಸ್ತೆಯಾಗಿರುವುದರಿಂದ ಜಾಗ್ರತೆಯಿಂದ ವಾಹನ ಓಡಿಸಬೇಕಾದ ಅನಿವಾರ್ಯತೆ ಚಾಲಕರದ್ದಾಗಿದೆ.
ಬೆಂಗಳೂರು ಕಚೇರಿಯಲ್ಲೇ ಕಡತ ಬಾಕಿ:
ಈ ಕಾಮಗಾರಿಗೆ ಟೆಂಡರ್ ಒಪ್ಪಂದ ಆಗಿದ್ದರೂ ಪರಿಷ್ಕೃತ ಅಂದಾಜು ವೆಚ್ಚ ಅನುಮೋದನೆ ಆಗದ ಕಾರಣದಿಂದ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಪ್ರಸ್ತುತ ಪ್ರಸ್ತಾವನೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪರಿಶೀಲನೆಗಾಗಿ ಬಾಕಿಯಾಗಿದೆ. ಈ ಆಡಳಿತಾತ್ಮಕ ವಿಳಂಬದಿಂದಾಗಿ ಕಾಮಗಾರಿಯ ಆರಂಭ ದಿನಾಂಕ ಘೋಷಣೆ ಆಗದೆ, ಗುತ್ತಿಗೆದಾರರು ಕೆಲಸ ಪ್ರಾರಂಭಿಸಲು ಸಾಧ್ಯವಾಗಿಲ್ಲ.
ಬೇಲೂರು-ಹಾಸನ ಚತುಷ್ಪಥ ರಸ್ತೆ ವಿಚಾರವಾಗಿ ಹಾಸನ, ಬೆಂಗಳೂರು ಕಚೇರಿಗಳಲ್ಲಿ ಸರಣಿ ಸಭೆಗಳು ನಡೆದಿವೆ. ಜನಪ್ರತಿನಿಧಿಗಳು ದಿನಾಂಕ ನಿಗದಿಪಡಿಸಿದಾಗ ಸಭೆಗೆ ಹಾಜರಾಗುವ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ಹೇಳಿ ತಕ್ಷಣದ ಸಮಸ್ಯೆಯಿಂದ ಪಾರಾಗುತ್ತಾರೆಯೇ ಹೊರತು ಮುಂದೇನು ಮಾಡಬೇಕೆಂದು ಯೋಚಿಸುವುದಿಲ್ಲ. ಭೂಸ್ವಾಧೀನಕ್ಕೆ ಹೆಚ್ಚುವರಿ ಅನುದಾನ ಬೇಕಿರುವ ವಿಚಾರ ಗೊತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲ. ಕೇವಲ ಜನಪ್ರತಿನಿಧಿಗಳು ಹೋರಾಡಿದರೆ ಕೆಲಸ ಆಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ. ರಸ್ತೆಗಾಗಿ ಸಾಲು ಸಾಲು ಸಭೆಗಳು ನಡೆಯುತ್ತಿವೆ ಹೊರತು ಫಲಿತಾಂಶ ಮಾತ್ರ ಶೂನ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ-373 ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ಸಂಬಂಧ ನಾನು ಹಲವು ಬಾರಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯವೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.