ತಾಲೂಕಿನ ಐದಳ್ಳ ಕಾವಲಿನ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಕೊಡದೆ ರೈತರಿಗೆ ಕೊಡಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ, ರಾಜಸ್ವ ನಿರೀಕ್ಷಕ ಉದೀತ್ ಕುಮಾರ್‌ಗೆ ಮನವಿ ಸಲ್ಲಿಸುತ್ತಿರುವ ರೈತ ಸಂಘದ ಕಾರ್ಯಕರ್ತರು.
ಬೇಲೂರು: ತಾಲೂಕಿನ ಐದಳ್ಳ ಕಾವಲಿನ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ಉಳಿಸಿಕೊಡಬೇಕು, ಇಲ್ಲದಿದ್ದಲ್ಲಿ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತ ಸಂಘದ ಕಾರ್ಯಕರ್ತರು ಸೋಮವಾರ ಸಂಜೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ರಾಜಸ್ವ ನಿರೀಕ್ಷಕ ಉದೀತ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲಿನಲ್ಲಿರುವ 2555 ಎಕರೆ ಸರ್ಕಾರಿ ಭೂಮಿಯನ್ನು 870ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡಿಕೊಂಡು ಬರುತಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಈ ಭೂಮಿ ನಮಗೆ ಸೇರಿದ್ದು ಎಂದು ರೈತರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವುದು ಖಂಡನೀಯ. ಐದಳ್ಳ ಕಾವಲಿನ ಸರ್ವೇ ನಂ 1ರ 2555 ಎಕರೆ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿ ಬರುತ್ತಿದೆ. ರೈತರ ಭೂಮಿಯನ್ನು ಅರಣ್ಯ ಇಲಾಖೆಯಿಂದ ಬಿಡಿಸಲೆತ್ನಿಸಿದ್ದರಿಂದ ರೈತರಿಗೆ ಭೂಮಿ ಉಳಿಸಿಕೊಡಿ ಎಂದು ಈಗಾಗಲೇ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ನೀಡಲಾಗಿದೆ.
ಭೂಮಿಗಾಗಿ ರೈತರು ಪಾದಯಾತ್ರೆ ಮಾಡಿದ್ದೇವೆ. ಐದಳ್ಳ ಕಾವಲಿನಲ್ಲಿ ಪ್ರೊ.ನಂಜುಂಡಸ್ವಾಮಿ ಪುತ್ಥಳಿ ಸ್ಥಾಪಿಸಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಅಲ್ಲದೆ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಪರಿಶೀಲಿಸುತಿದ್ದೇವೆ ಎಂದಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿಯಲ್ಲಿ ಜೆಸಿಬಿ ಯಂತ್ರ ತಂದು ಕಾಲುವೆ ತೆಗೆಸಲು ಮುಂದಾಗಿದ್ದರಿಂದ ರೈತರೆಲ್ಲ ಸೇರಿ ಜೆಸಿಬಿ ಯಂತ್ರವನ್ನು ವಾಪಸ್ ಕಳುಹಿಸಿದ್ದು, ಮುಂದೆ ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗದಂತೆ ರೈತರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ನಿಂಗಪ್ಪ, ಅಯ್ಯಬಾ ಸಾಬ್, ವಿಜಾಜ್ ಪಾಷ, ಮಹಮ್ಮದ್ ದಸ್ತಗಿರ್, ಭೋಜರಾಜ್, ಹನುಮಂತ ಮತ್ತಿತರರಿದ್ದರು.