ತಾಲೂಕಿನ ಅರೇಹಳ್ಳಿ ಸಮೀಪದ ಮುನೀರ್ ಅವರ ಕಣದಲ್ಲಿದ್ದ ಹಾಗೂ ಬಿಕ್ಕೋಡು ಹೋಬಳಿಯ ಮಳವಳ್ಳಿ(ಕೌರಿ)ಗ್ರಾಮದ ಧನಂಜಯಮೂರ್ತಿ ಅವರ ತೋಟದಲ್ಲಿದ್ದ ಕಾಫಿಯನ್ನು ಕಳವು ಮಾಡಿ ಉಳಿದಿದ್ದನ್ನು ಬಿಟ್ಟು ಹೋಗಿರುವುದು. 
ಹಾಸನ

ಹೆಚ್ಚಿದ ಕಾಫಿ ಕಳ್ಳತನ, ಬೆಳೆಗಾರರು ಆತಂಕ

ಬೇಲೂರು :ಇತ್ತೀಚಿನ ದಿನಗಳಲ್ಲಿ ಉತ್ತಮ ಧಾರಣೆ ಹೊಂದಿರುವ ಕಾಫಿಗೆ ಕಳ್ಳರ ಕಾಟ ಹೆಚ್ಚಾಗಿದ್ದು, ಸೋಮವಾರ ರಾತ್ರಿ ತಾಲೂಕಿನ ಅರೇಹಳ್ಳಿ ಸಮೀಪದ ಮುನೀರ್ ಅವರ ಕಣದಲ್ಲಿ ಹಾಗೂ ಬಿಕ್ಕೋಡು ಹೋಬಳಿಯ ಮಳವಳ್ಳಿ(ಕೌರಿ)ಗ್ರಾಮದ ಧನಂಜಯಮೂರ್ತಿ ಅವರ ತೋಟದಲ್ಲಿ ಕೊಯ್ಲು ಮಾಡಿದ್ದ ಕಾಫಿ ಕಳ್ಳತನವಾಗಿದೆ.
ತಾಲೂಕಿನ ಅರೇಹಳ್ಳಿ-ಬಿಕ್ಕೋಡು ಹೋಬಳಿಗಳಲ್ಲಿನ ಕಾಡಾನೆಗಳ ಉಪಟಳದ ನಡುವೆಯೂ ಬೆಳೆ ಬೆಳೆದಿರುವ ಬೆಳೆಗಾರರಿಗೆ ಒಂದೆಡೆ ಕಾಡಾನೆಗಳ ಉಪಟಳವಾದರೆ ಮತ್ತೊಂದು ಕಡೆ ಕಳ್ಳರ ಕಾಟ ಕಾಡತೊಡಗಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದು, ಕಳ್ಳರ ಕಣ್ಣು ಕೊಯ್ಲು ಮಾಡಿಟ್ಟಿರುವ ತೋಟ ಹಾಗೂ ಮನೆಯ ಅಂಗಳದಲ್ಲಿ ಒಣಗಲು ಹಾಕಿರುವ ಕಾಫಿಯ ಮೇಲೆ ಬಿದ್ದಿದೆ. ಈ ಕಾರಣಗಳಿಂದಾಗಿ ತಾಲೂಕಿನ ಅರೇಹಳ್ಳಿಯ ಮುನೀರ್ ಅವರ ಕಣದಲ್ಲಿದ್ದ ಕಾಫಿ ಹಾಗೂ ಧನಂಜಯಮೂರ್ತಿ ಅವರು ಕೊಯ್ಲು ಮಾಡಿ ತೋಟದಲ್ಲಿ 20ಕ್ಕೂ ಹೆಚ್ಚು ಚೀಲಗಳಲ್ಲಿ ಸಂಗ್ರಹಿಸಿದ್ದ ಕಾಫಿಯನ್ನು ಕಳ್ಳರು ಸೋಮವಾರ ರಾತ್ರಿ ಕದ್ದೊಯ್ದಿದ್ದಾರೆ. ಇದರಿಂದ ಬೆಳೆಗಾರರು ಮತ್ತು ಸಣ್ಣ ರೈತರು ಆತಂಕಗೊಂಡಿದ್ದಾರೆ. ಈಗ ತೋಟ ಹಾಗೂ ಕಣದಲ್ಲಿ ಕಳ್ಳತನ ಮಾಡುತ್ತಿರುವವರು ಮುಂದೆ ಮನೆ ಮತ್ತು ಗೋದಾಮುಗಳಿಗೆ ನುಗ್ಗಿ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಕಳ್ಳತನಕ್ಕೆ ಮುಂದಾದರೆ ಯಾರು ಹೊಣೆ ಎಂಬುದು ಬೆಳೆಗಾರರ ಅಳಲಾಗಿದೆ.
ಪೊಲೀಸರು ಇನ್ನಾದರೂ ರಾತ್ರಿ ಸಮಯ ಗ್ರಾಮಗಳಿಗೆ ಬೀಟ್ ಬಂದು ಹೋದರೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡರೆ ಕಳ್ಳತನಕ್ಕೆ ಕಡಿವಾಣ ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ಜತೆಗೆ ಕಾಫಿ ಕಳ್ಳತನ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.