ಹನುಮದ್ ವ್ರತ ಹಾಗೂ ಶೋಭಾಯಾತ್ರೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪ ಮತ್ತು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಿರುವುದು.  
ಹಾಸನ

ಹನುಮದ್ ವ್ರತಾಚರಣೆಗೆ ಬೇಲೂರು ಸಜ್ಜು

ಪ್ರಮುಖ ಮುಖ್ಯಾಂಶಗಳು

  • ಎಲ್ಲೆಡೆ ಕಂಗೊಳಿಸುತ್ತಿರುವ ವಿದ್ಯುತ್ ದೀಪ, ಕೇಸರಿ ಬಂಟಿಂಗ್ಸ್
  • ಶೋಭಾಯಾತ್ರೆದಲ್ಲಿ ಸಾವಿರಾರು ಹನುಮನ ಭಕ್ತರು ಭಾಗಿ
  • ಉಗ್ರನರಸಿಂಹನ ಬೃಹತ್ ಗಾತ್ರದ ಸ್ತಬ್ಧಚಿತ್ರ ಆಕರ್ಷಣೆ
ಬೇಲೂರು: ಬೇಲೂರಿನಲ್ಲಿ ಡಿ.13ರಂದು ಆಯೋಜಿಸಿರುವ ಹನುಮದ್ ವ್ರತಕ್ಕೆ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು, ಪಟ್ಟಣದ ಪ್ರಮುಖ ಬೀದಿಗಳು ವಿದ್ಯುತ್ ದೀಪ, ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದೆ. ದೇಗುಲದ ಮುಂಭಾಗ ಅಳವಡಿಸಿರುವ ಉಗ್ರ ನರಸಿಂಹನ ಬೃಹತ್ ಗಾತ್ರದ ಸ್ತಬ್ಧಚಿತ್ರ ಭಕ್ತರ ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ಸಮಿತಿಯಿಂದ 13ನೇ ವಾರ್ಷಿಕೋತ್ಸವ ಹಾಗೂ ಹನುಮದ್ ವ್ರತದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವರ್ಷಕ್ಕಿಂತ ವರ್ಷ ಹನುಮದ್ ವ್ರತ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಆದರೆ ಈ ಬಾರಿ ಪಟ್ಟಣದಲ್ಲಿ ಸಕಲ ಸಿದ್ಧತೆ ನಡೆಸಿರುವ ಸಮಿತಿ ಪದಾಧಿಕಾರಿಗಳು ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ಹಾಗೂ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ನಗರದ ಪ್ರಮುಖ ವೃತ್ತಗಳಿಗೆ ಕೇಸರಿ ಬಂಟಿಂಗ್ಸ್ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿರುವುದು ನೋಡುಗರನ್ನು ಆಕರ್ಷಿಸುತ್ತಿದೆ.
ವಿಶೇಷವಾಗಿ ಜಯಂತಿ ಆಚರಿಸಬೇಕೆಂಬ ನಿಟ್ಟಿನಲ್ಲಿ ಮುಖಂಡ ನಾಗೇನಹಳ್ಳಿ ಸಂತೋಷ್ ನೇತೃತ್ವದಲ್ಲಿ ಶ್ರೀ ಚನ್ನಕೇಶವ ದೇಗುಲದ ರಾಜಗೋಪುರದ ಮುಂಭಾಗ ಉಗ್ರ ನರಸಿಂಹನ ಆಕರ್ಷಕವಾದ ಬೃಹತ್ ಗಾತ್ರದ ಸ್ತಬ್ಧಚಿತ್ರ ಮತ್ತು ನೆಹರುನಗರದ ವೃತ್ತದಲ್ಲಿ ಶಿವಾಜಿ ಮಹಾರಾಜರ ಸ್ತಬ್ಧಚಿತ್ರ ಸೇರಿದಂತೆ ಇತರೆಡೆಯೂ ಕೆಲ ಸ್ತಬ್ಧಚಿತ್ರಗಳನ್ನು ಅಳವಡಿಸುವ ಮೂಲಕ ಪಟ್ಟಣಕ್ಕೆ ವಿಶೇಷ ಮೆರುಗು ನೀಡಿದ್ದಾರೆ.
ಅಲ್ಲದೆ ಪಟ್ಟಣದ ಎಲ್ಲೆಡೆಯಿಂದ ಹನುಮನ ಭಕ್ತರು ಆಗಮಿಸಬೇಕು ಎಂಬ ಉದ್ದೇಶದಿಂದ ಹನುಮದ್ ವ್ರತಕ್ಕಾಗಿ ವಿವಿಧ ರೀತಿಯ ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗಿದೆ. ಲಕ್ಷ್ಮೀಪುರದ ಶ್ರೀ ವೀರಾಂಜನೇಯ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಿಶೇಷ ಹೋಮ, ಹವನದೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ದೇಗುಲದ ಸಮೀಪ ಆಗಮಿಸುವ ಸಾವಿರಾರು ಭಕ್ತರಿಗೆ ಸಮಿತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ದೇವರ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಂಸ್ಕೃತಿಕ ಕಲಾ ತಂಡ ಹಾಗೂ ಡಿಜೆಯೊಂದಿಗೆ ಮೆರವಣಿಗೆ ನಡೆಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕೆಲ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹನುಮದ್ ವ್ರತ ಹಾಗೂ ಶೋಭಾಯಾತ್ರೆಗೆ ಸಾವಿರಾರು ಭಕ್ತರು ಸೇರುವುದರಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಆಗಮಿಸಿ ವ್ಯವಸ್ಥೆ ಬಗ್ಗೆ ಅವಲೋಕಿಸಿ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.
ಪೊಲೀಸ್ ಬಿಗಿಬಂದೋಬಸ್ತ್‌ಗಾಗಿ ಪೊಲೀಸ್ ವರಿಷ್ಠಾಧಿಕಾರಿ, ಅಡಿಷನಲ್ ಎಸ್‌ಪಿ 2, ಡಿವೈಎಸ್‌ಪಿ-4, ಪೊಲೀಸ್ ಇನ್‌ಸ್ಪೆಪೆಕ್ಟರ್-14, ಪಿಎಸ್‌ಐ ಹಾಗೂ ಎಎಸ್‌ಐ, ಎಚ್‌ಸಿ, ಪಿಸಿ, ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 600 ಜನರನ್ನು ನಿಯೋಜಿಸಲಾಗಿದೆ.