ಬೇಲೂರು ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಸೆಸ್ಕ್ ಬೇಲೂರು ಉಪ ವಿಭಾಗದಿಂದ ಆಯೋಜಿಸಿದ್ದ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳು ಪ್ರಶಸ್ತಿಯೊಂದಿಗಿರುವುದು. 
ಹಾಸನ

ಕ್ರೀಡಾಕೂಟಗಳಿಂದ ಮಾನಸಿಕ, ದೈಹಿಕ ಆರೋಗ್ಯ ಸಾಧ್ಯ

ಬೇಲೂರು: ಪ್ರತಿನಿತ್ಯ ಕರ್ತವ್ಯವದ ಒತ್ತಡದಲ್ಲಿರುವ ನೌಕರರು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಎಲ್ಲರೊಂದಿಗೂ ಬೆರೆತರೆ ಮಾನಸಿಕ, ದೈಹಿಕವಾಗಿ ಆರೋಗ್ಯವಾಗಿರಲು ಸಹಕಾರಿ ಎಂದು ಬೇಲೂರು ಉಪ ವಿಭಾಗದ ಸೆಸ್ಕ್ ಎಇಇ ಬಸವರಾಜು ತಿಳಿಸಿದರು.
ಪಟ್ಟಣ ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಸೆಸ್ಕ್ ಬೇಲೂರು ಉಪ ವಿಭಾಗದಿಂದ ಸೆಸ್ಕ್‌ನ ವಿವಿಧ ಸೆಕ್ಷನ್‌ನ ತಂಡಗಳಿಗಾಗಿ ಭಾನುವಾರ ಆಯೋಜಿಸಿದ್ದ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವರ್ಷಪೂರ್ತಿ ಒತ್ತಡದಲ್ಲೆ ಕೆಲಸ ನಿರ್ವಹಿಸುವ ನಮ್ಮ ನೌಕರರು ಒಂದೆರಡು ದಿನವಾದರೂ ಎಲ್ಲರೂ ಒಟ್ಟಾಗಿ ಇಂತಹ ಕ್ರೀಡಾಕೂಟಗಳಲ್ಲಿ ಒಂದೆಡೆ ಸೇರಿ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಮೂಲಕ ಕ್ರೀಡೆಯಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲೂ ಅವರು ಕರ್ತವ್ಯದೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲಿ ಎಂದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, ಬೇಲೂರಿನ ಸೆಸ್ಕ್ ವಿಭಾಗದಿಂದ ತಾಲೂಕಿನ ವಿವಿಧ ಸೆಕ್ಷನ್‌ನ 5 ತಂಡಗಳು ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆದಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಗೆಲುವು, ಸೋಲು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ರೀಡೆಗಳಲ್ಲಿ ಭಾಗವಹಿಸಿ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲು ಮುಂದಾದಾಗ ಮಾತ್ರ ತಮ್ಮ ವೃತ್ತಿಯಲ್ಲೂ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಿಇಸಿ ಸದಸ್ಯ ನವಾಜ್ ಖಾನ್ ಮಾತನಾಡಿದರು. ಎಸ್‌ಎಸ್‌ಟಿ 66 ಘಟಕದ ಉಪಾಧ್ಯಕ್ಷ ಚಂದ್ರಶೇಖರ್, ಕೆಪಿಟಿಸಿಎಲ್ ಜೆಇ ನಾಗರಾಜ್, ಜೆಇ ಪವಿತ್ರಾ, ಪ್ರೈಮರಿ ಸಮಿತಿ ಅಧ್ಯಕ್ಷ ಮಂಜುನಾಥ್, ನಿರ್ದೇಶಕ ರಾಘವೇಂದ್ರ, ಕಾರ್ಯದರ್ಶಿ ದ್ವಾರಕನಾಥ್ ಇತರರಿದ್ದರು.
ಕ್ರೀಡಾಕೂಟದಲ್ಲಿ ಬೇಲೂರು ವಿಭಾಗದ ತಂಡ ಪ್ರಥಮ ಸ್ಥಾನ ಪಡೆದರೆ, ಹಳೇಬೀಡು ತಂಡ ದ್ವಿತೀಯ ಸ್ಥಾನ ಪಡೆಯಿತು.