ರೈತರಿಗೆ ಬೆಳೆ ಪರಿಹಾರ ಹಾಗೂ ಬೇಲೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಕಾಫಿ ಬೆಳೆಗಾರರ ಸಂಘದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬೇಲೂರು: ತೀವ್ರ ಬರಗಾಲ ಎದುರಿಸುತ್ತಿರುವ ಬೇಲೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಕಾಫಿ ಬೆಳೆಗಾರರ ಸಂಘದ ಕಾರ್ಯಕರ್ತರು, ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಪಟ್ಟಣದ ಬಸವೇಶ್ವರ ವೃತ್ತಕ್ಕೆ ತೆರಳಿ ರಸ್ತೆ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬೋಗ ಮಲ್ಲೇಶ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಮಳೆ ಇಲ್ಲದೆ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೈತರು ಸಾಧ್ಯವಾಗದೆ ಪರಿತಪಿಸುತ್ತಿರುವುದು ಕಣ್ಮುಂದಿದೆ. ಆದರೆ ರಾಜ್ಯ ಸರ್ಕಾರ ರಾಜ್ಯದ 150 ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಿದೆ. ಆದರೆ ಬೇಲೂರು ತಾಲೂಕಿನಲ್ಲಿ ಬರವಿದ್ದರೂ ಬರ ಪೀಡಿತ ಪ್ರದೇಶವೆಂದು ಘೋಷಿಸದಿರುವುದರ ಹಿಂದೆ ರಾಜಕಾರಣ ಎದ್ದು ಕಾಣುತ್ತಿದೆ. ಜತೆಗೆ ಮಲೆನಾಡು ಪ್ರದೇಶದ ತೋಟದ ಬೆಳೆಗಳಿಗೂ ಮಳೆ ಇಲ್ಲದೆ ತೊಂದರೆಯಾಗಿದೆ. ಒಂದೆಡೆ ಆನೆ ಹಾವಳಿಯಿಂದ ರೈತರು ತತ್ತರಿಸುತ್ತಿದ್ದಾರೆ. ಸರ್ಕಾರ ಮಾತ್ರ ಬೇಲೂರಿನ ರೈತರ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜಕಾರಣಕ್ಕಾಗಿ ಬೇಕಾದರೆ ರಾಜಕೀಯಕ್ಕೆ ಮಾಡಲಿ. ಅದನ್ನು ಬಿಟ್ಟು ರೈತರ ಮೇಲೆ ದರ್ಪ ತೋರುವುದು ಬೇಡ. ತಕ್ಷಣವೇ ಬೇಲೂರನ್ನೂ ಸಹ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ತಾಲೂಕು ಸಂಪೂರ್ಣ ಬರಗಾಲದಿಂದ ಕೂಡಿದ್ದರೂ ಬರ ಪೀಡಿತವೆಂದು ಘೋಷಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇತ್ತ ರೈತರಿಗೆ ಬೆಳೆ ಪರಿಹಾರವೂ ಇಲ್ಲ. ಈ ಬಗ್ಗೆ ರಾಜಕಾರಣಿಗಳು ಗಮನ ಹರಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೆಳೆಹಾನಿ ಬಗ್ಗೆ ತಿಳಿದು ಬರ ಪೀಡಿತಕ್ಕೆ ಸೇರಿಸುತ್ತೇನೆ ಎಂದು ಹೇಳಿದ್ದು ಹುಸಿಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಈಗ ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ಇನ್ನೊಂದು ವಾರದಲ್ಲಿ ಬೆಳೆ ಪರಿಹಾರ ಹಾಗೂ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಬೇಲೂರು ತಾಲೂಕನ್ನು ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇಲ್ಲಿನ ರಾಜಕಾರಣದಿಂದಾಗಿ ರೈತರು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ವರ್ತಕರು ಬೇಲೂರು ಬಂದ್‌ಗೆ ಬೆಂಬಲ ನೀಡಬೇಕು ಎಂದರು.
ಕಾಫಿ ಬೆಳೆಗಾರ ಸಿದ್ದೇಗೌಡ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಮಳೆ ಇಲ್ಲದೆ ಬೆಳೆ ಹಾನಿಯಾಗಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಬೆಳೆ ನಷ್ಟದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಲೆನಾಡು ಭಾಗದಲ್ಲಿ 70 ಇಂಚು ಮಳೆ ಬರಬೇಕಿತ್ತು. ಆದರೆ ಇಲ್ಲಿವರೆಗೆ 15 ಇಂಚು ಮಳೆ ಆಗಿದೆ. ಬಹು ವಾರ್ಷಿಕ ಬೆಳೆ ಕಾಫಿ ಉದುರುತ್ತಿದೆ. ಮೆಣಸು ಒಣಗುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ನದಿಯಲ್ಲಿ ನೀರಿನ ಕೊರತೆ ಇದೆ. ಆದ್ದರಿಂದ ಬೇಲೂರು ತಾಲೂಕನ್ನು ಬರ ಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಕಾಫಿಬೆಳೆಗಾರ ಸಂಘದ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ನಿರ್ದೇಶಕ ಕೋಗೋಡು ಸಂತೋಷ್, ಶೇಷೇಗೌಡ, ಕೆಆರ್‌ಎಸ್ ಪಕ್ಷದ ಮುಖಂಡ ಆದೇಶ್, ರೈತ ಸಂಘ ಮುಖಂಡರಾದ ಬಸವರಾಜು, ಪುಟ್ಟಸ್ವಾಮಿ, ಭೂಮೇಶ್, ಮಲ್ಲಿಕಾರ್ಜುನ್, ಸುರೇಶ್, ಪರಮೇಶ್ವರಪ್ಪ, ಮಧು, ವಿರೂಪಾಕ್ಷ ಸೇರಿದಂತೆ ಇತರರಿದ್ದರು.