ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಜಾಥಾಕ್ಕೆ ಚಾಲನೆ ನೀಡಲಾಯಿತು. ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಇತರರಿದ್ದರು.
ಬೇಲೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಜ್ರ ಮಹೋತ್ಸವದ ಅಂಗವಾಗಿ ಸ್ಥಳೀಯ ಸಂಸ್ಥೆಯಿಂದ ರಸ್ತೆ ಸುರಕ್ಷತೆ ಅಂಗವಾಗಿ ಶನಿವಾರ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಆವರಣದಿಂದ ಮುಖ್ಯ ರಸ್ತೆಗಳಲ್ಲಿ ಜಾಥಾ ಮೂಲಕ ವಿವಿಧ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಸ್ತೆ ಸುರಕ್ಷತಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಬೇಲೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರೇವಣ್ಣ, ರಸ್ತೆ ಸುರಕ್ಷತೆ ಎಂಬುದು ಕಾನೂನು ಜಾರಿಗೆ ಮಾತ್ರ ಸೀಮಿತ ವಿಷಯವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜೀವನದ ಸುರಕ್ಷತೆಯ ಪ್ರಶ್ನೆಯಾಗಿದೆ. ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸದೆ ಉಲ್ಲಂಘಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಾಲನೆ, ಸೀಟ್ ಬೆಲ್ಟ್ ಬಳಸದೆ ಕಾರು ಚಲಾಯಿಸುವುದು, ವೇಗ ಮೀರಿಸುವುದು ಹಾಗೂ ಮೊಬೈಲ್ ಫೋನ್ ಬಳಸುತ್ತಾ ವಾಹನ ಓಡಿಸುವುದು ಪ್ರಮುಖವಾಗಿ ಜೀವ ಹಾನಿಗೆ ಕಾರಣವಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಯಿಂದ ಕಠಿಣ ಕ್ರಮಗಳನ್ನು ಕೈಗೊಂಡು ದಂಡ ವಿಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರಲ್ಲಿ ಸ್ವಯಂ ಜಾಗೃತಿ ಮತ್ತು ಶಿಸ್ತಿನ ಮನೋಭಾವ ಬೆಳೆಸುವುದು ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ಮತ್ತು ಯುವಕರು ಸಂಚಾರ ನಿಯಮಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಈಶ್ವರಪ್ಪ ಮಾತನಾಡಿ, ರಸ್ತೆ ಸುರಕ್ಷತೆ ಎಂಬುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಯುವ ಪೀಳಿಗೆಯು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇತರರಿಗೆ ಮಾದರಿಯಾಗಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ವೇತಾ, ಮಾನಸ, ವಾಣಿ, ಹಾಗೂ ವಿದ್ಯಾರ್ಥಿಗಳಿದ್ದರು.