ಬೇಲೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಶ್ರೀಧರ ಕಂಕನವಾಡಿ, ರೇವಣ್ಣ, ಭಾಗ್ಯಮ್ಮ, ಕಾಂತರಾಜ್ ಇತರರಿದ್ದರು. 
ಹಾಸನ

ಬೇಲೂರನ್ನು ಬರಪೀಡಿತವೆಂದು ಘೋಷಿಸಿ

ಲೋಕೇಶ್ ಮನು. ಡಿ
ಬೇಲೂರು: ತಾಲೂಕಿನಲ್ಲಿ ಮಳೆಯಾಗದೆ ಬಿತ್ತನೆ ಪ್ರಕ್ರಿಯೆ ವಿಳಂಬವಾಗಿದ್ದು, ಈಗಾಗಲೇ ಬಿತ್ತಿರುವ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ಬೇಲೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಲೂರು ತಾಲೂಕು ಮಲೆನಾಡು, ಅರೆಮಲೆನಾಡು ಪ್ರದೇಶವಾಗಿದೆ. ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸುವ ಮುನ್ನ ಕೆಲ ಅಧಿಕಾರಿಗಳು ಮಲೆನಾಡು ಪ್ರದೇಶವನ್ನು ಮಾನದಂಡವಾಗಿ ಪರಿಗಣಿಸಿದರೆ ರೈತರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವೈಜ್ಞಾನಿಕವಾದ ಅಂಕಿ ಅಂಶವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಬೇಕು. ತಾಲೂಕಿನಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿದ ಮುಸುಕಿನ ಜೋಳ ಬಿಳಿ ಸುಳಿ ರೋಗದಿಂದ ನಾಶವಾಗುತ್ತಿದೆ. ಈ ಬಗ್ಗೆ ನಾನೆ ಖುದ್ದು ಪರಿಶೀಲಿಸಿದ್ದೇನೆ. ಈ ವಿಚಾರವಾಗಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನಲ್ಲಿನ ಮಳೆಯ ಕೊರತೆ, ಬೆಳೆ ನಾಶ, ಕುಡಿಯುವ ನೀರಿನ ಅಭಾವ ವಿಚಾರ ಪ್ರಸ್ತಾಪಿಸುತ್ತೇನೆ. ಕ್ಷೇತ್ರದಲ್ಲಿ ಬರ ಆವರಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ. ಈಗಾಗಲೇ ಕಂದಾಯ ಮಂತ್ರಿಗಳಿಗೆ ಸಮಗ್ರ ಮಾಹಿತಿಯನ್ನು ಪತ್ರದ ಮೂಲಕ ಸಲ್ಲಿಸಿ ಮನವಿ ಮಾಡಿದ್ದಲ್ಲದೆ, ಖುದ್ದಾಗಿ ಮಾತನಾಡಿದ್ದೇನೆ.
ಆದರೆ ಇಲ್ಲಿ ಅಧಿಕಾರಿಗಳ ವರದಿ ಮೇಲೆಯೇ ಬರ ಪೀಡಿತ ಪ್ರದೇಶ ಎಂದು ಘೋಷಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ಕಾರ ಸರಿಯಾದ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ರೈತರ ಹೊಟ್ಟೆ ಮೇಲೆ ಹೊಡೆಯ ಬೇಡಿ, ಕಳೆದ ಸಾಲಿನ ಮಳೆ ಸರಾಸರಿಯಲ್ಲಿ ಪ್ರಸ್ತುತ ಮಳೆ ವಾಡಿಕೆಯಂತೆ ಶೇ.38ರಷ್ಟು ಕಡಿಮೆ ಮಳೆಯಾಗಿದೆ. ಮಳೆಯ ಕೊರತೆಯಿಂದ ಮುಸುಕಿನ ಜೋಳ, ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ನಾಶವಾಗುತ್ತಿವೆ. ಜಾನುವಾರಿಗಳಿಗೆ ಮೇವು, ಕುಡಿಯುವ ನೀರಿನ ಕೊರತೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ತಹಸೀಲ್ದಾರ್ ಶ್ರೀಧರ ಕಂಕನವಾಡಿ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಕಾಂತರಾಜ್, ಪಶು ವೈದ್ಯಾಧಿಕಾರಿ ಡಾ.ಅನಂತರಾಜ್, ತೋಟಗಾರಿಕೆ ಸಹಾಯಕ ನಿರ್ದೇಶಕ ಲೋಹಿತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಬಿಸಿಎಂ ಅಧಿಕಾರಿ ಮುದುಕಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.