ವರ್ಷದಿಂದ ಕುಂಟುತ್ತ ಸಾಗಿದ್ದ ಪಟ್ಟಣದ ಬಿಕ್ಕೋಡು ರಸ್ತೆ ಕಾಮಗಾರಿ ಸಂದರ್ಭ ಟ್ರಾೃಕ್ಟರ್ ರಸ್ತೆ ಬದಿಯ ಚರಂಡಿಗೆ ಸಿಲುಕಿ ಉಂಟಾದ ವಾಹನಗಳ ದಟ್ಟಣೆಯಿಂದ ಸ್ಥಳೀಯರು ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 
ಹಾಸನ

ರಸ್ತೆ ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ

ಬೇಲೂರು:

ವರ್ಷದಿಂದ ಕುಂಟುತ್ತ ಸಾಗಿರುವ ಪಟ್ಟಣದ ಬಿಕ್ಕೋಡು ರಸ್ತೆ ಕಾಮಗಾರಿಯಿಂದಾಗಿ ಟ್ರಾೃಕ್ಟರ್ ಒಂದು ರಸ್ತೆ ಬದಿಯ ಚರಂಡಿಗೆ ಸಿಲುಕಿ ವಾಹನ ದಟ್ಟಣೆ ಉಂಟಾದ್ದರಿಂದ ಸ್ಥಳೀಯರು ರಸ್ತೆ ಸಂಚಾರ ತಡೆ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಶನಿವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಬೇಲೂರು-ಸಕಲೇಶಪುರ ರಸ್ತೆಯ ಪಟ್ಟಣದ ಕೆಂಪೇಗೌಡ ರಸ್ತೆ ಕಾಮಗಾರಿಯನ್ನು ಒಂದು ಕೋಟಿ ರೂ. ಅನುದಾನದಲ್ಲಿ ಪ್ರಾರಂಭಿಸಿ ವರ್ಷ ಕಳೆದಿದ್ದರೂ ಗುತ್ತಿಗೆದಾರ ಮತ್ತು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಆದರೆ, ರಸ್ತೆ ಕಾಮಗಾರಿಯ ನಡುವೆ ಒಳ ಚರಂಡಿ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಗಳಿಂದ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ಪರದಾಡುವಂತಾಗಿದೆ. ಇದರ ನಡುವೆಯೇ ಮಳೆ ಬಂದು ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣಕ್ಕೆಂದು ರಸ್ತೆಯನ್ನು ಅಗೆದು ಬಿಟ್ಟಿದ್ದರು. ಆದರೆ ಎರಡು ದಿನಗಳ ಹಿಂದಷ್ಟೆ ಲಾರಿಯೊಂದು ಚರಂಡಿಗಿಳಿದ ಕಾರಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದರು. ನಂತರ ಲಾರಿ ತೆಗೆದು ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಶನಿವಾರ ಸಂಜೆ 5 ಗಂಟೆ ಸಮಯದಲ್ಲಿ ಇದೇ ರಸ್ತೆಯಲ್ಲಿ ಟ್ರಾೃಕ್ಟರ್ ಚರಂಡಿಗಿಳಿದು ಮತ್ತೆ ಸಂಚಾರಸಿಕ್ಕು ಉಂಟಾದ್ದರಿಂದ ಸ್ಥಳೀಯರು ಆಕ್ರೋಶಗೊಂಡು ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರಬೇಕೆಂದು ಪಟ್ಟುಹಿಡಿದು ಪ್ರತಿಭಟಿಸಿದ್ದರಿಂದ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಸಮಸ್ಯೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಸ್ಥಳಕ್ಕಾಗಮಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಕೈಬಿಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪುರಸಭೆ ಮಾಜಿ ಸದಸ್ಯ ರವಿ, ಲತೀಫ್, ಯೋಗೇಶ್, ಮಂಜುನಾಥ್ ಸೇರಿದಂತೆ ಸ್ಥಳೀಯರಿದ್ದರು.