ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬಾಸೂರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಹಸುವನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿ ಯತೀಶ್ ಮತ್ತಿತರರಿದ್ದರು. 
ಹಾಸನ

ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಕಾಡಾನೆ ದಾಳಿ

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಬಾಸೂರ ಗ್ರಾಮದಲ್ಲಿ ಬುಧವಾರ ಮನೆಯ ಸಮೀಪ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಹಸು ಗಂಭೀರವಾಗಿ ಗಾಯಗೊಂಡಿದೆ.
ಬುಧವಾರ ಅರೇಹಳ್ಳಿ ಹೋಬಳಿಯ ಬಾಸೂರ ಗ್ರಾಮದ ಸಮೀಪದಲ್ಲೇ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದವು. ಆದರೆ ಕಾಡಾನೆಗಳ ಗುಂಪಿನಿಂದ ಬೇರಾದ ಕಾಡಾನೆಯೊಂದು ನೇರವಾಗಿ ಬಾಸೂರ ಗ್ರಾಮದೊಳಕ್ಕೆ ನುಗ್ಗಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಶೇಖರ್ ಅವರ ಹಸುವಿನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿ ಸ್ಥಳದಿಂದ ತೆರಳಿದೆ.
ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹಸುವನ್ನು ನೋಡಿದ ಮನೆಯವರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಲಯ ಅರಣ್ಯಾಧಿಕಾರಿ ಯತೀಶ್ ಸಿಬ್ಬಂದಿ ಮತ್ತು ಪಶು ವೈದ್ಯರೊಂದಿಗೆ ಘಟನೆ ಸ್ಥಳಕ್ಕೆ ತೆರಳಿ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಹಸುವಿನ ಸ್ಥಿತಿ ಚಿಂತಾಜನಕವಾಗಿದ್ದು, ಪಶು ವೈದ್ಯರು ಚಿಕಿತ್ಸೆಗೆ ಮುಂದುವರಿಸಿದ್ದಾರೆ.
ಮನುಷ್ಯರು ಸಿಲುಕಿದ್ದರೆ ಏನು ಗತಿ?: ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಪ್ರತಿನಿತ್ಯ ಒಂದಿಲ್ಲೊಂದು ಗ್ರಾಮದಲ್ಲಿ ಉಪಟಳ ಇದ್ದಿದ್ದೆ. ಆದರೆ ಈ ಆನೆಗಳನ್ನು ಕಾಡಿಗಟ್ಟುವಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಅಕಸ್ಮಾತ್ ಹಸು ಅಲ್ಲದೆ ಮನುಷ್ಯರೇನಾದರೂ ಆ ಸ್ಥಳದಲ್ಲಿ ಕೆಲಸ ಅಥವಾ ಕುಳಿತಿದ್ದರೆ ಏನು ಗತಿ ಎಂಬುದು ಸ್ಥಳೀಯರ ವಾದವಾಗಿದ್ದು, ಇನ್ನಾದರೂ ಅರಣ್ಯ ಮಂತ್ರಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಡಾನೆಗಳನ್ನು ಶಾಶ್ವತವಾಗಿ ದೂರದ ಕಾಡಗಟ್ಟಲು ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.