ಸಕಲೇಶಪುರದ ತೇಜಸ್ವಿ ವೃತ್ತದಲ್ಲಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಸಚಿನ್ ಪ್ರಸಾದ್, ಸಫಿರ್, ಲೋಹಿತ್ ಇದ್ದರು. 
ಹಾಸನ

ತೇಜಸ್ವಿ ವೃತ್ತ ತೆರವಿಗೆ ಮುನ್ನ ವಾಸ್ತವ ಪರಿಶೀಲಿಸಿ ಕ್ರಮಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯ
  • ಸ್ಥಳೀಯರಿಂದ ಅಹವಾಲು ಸ್ವೀಕಾರ

ಸಕಲೇಶಪುರ:

ತೇಜಸ್ವಿ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆ ವಿಸ್ತರಣೆ ಮತ್ತು ಒತ್ತುವರಿ ತೆರವು ಕಾರ್ಯಕ್ಕೂ ಮೊದಲು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ವಾಸ್ತವ ಸ್ಥಿತಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ತೇಜಸ್ವಿ ವೃತ್ತದಲ್ಲಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಪಟ್ಟಣದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯಾಗಿದ್ದು, ವೃತ್ತ ಅಭಿವೃದ್ಧಿ ಹಾಗೂ ರಸ್ತೆ ವಿಸ್ತರಣೆ ಅಗತ್ಯವಾಗಿದೆ. ಆದರೆ ವ್ಯಾಪಾರಸ್ಥರು ಹಾಗೂ ಕಟ್ಟಡ ಮಾಲೀಕರ ಹಿತ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆ, ವೃತ್ತದ ವಿನ್ಯಾಸ ಮತ್ತು ಅಗತ್ಯವಿರುವ ಜಾಗದ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟವಾಗಿ ಪರಿಶೀಲಿಸಬೇಕು. ಹಲವು ವ್ಯಾಪಾರಸ್ಥರು ಬ್ಯಾಂಕ್ ಹಾಗೂ ವಿವಿಧ ಸಂಘಗಳಿಂದ ಸಾಲ ಪಡೆದು, ಖಾತೆ ಮತ್ತು ತೆರಿಗೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಏಕಾಏಕಿ ತೆರವುಗೊಳಿಸಿದರೆ ತೊಂದರೆಯಾಗಲಿದ್ದು, ಕಾನೂನುಬದ್ಧ ಪ್ರಕ್ರಿಯೆ ಹಾಗೂ ವಾಸ್ತವ ಸ್ಥಿತಿ ಪರಿಗಣಿಸಬೇಕು ಎಂದು ಹೇಳಿದರು.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಸೆ. 2ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸ್ಥಳೀಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ರಸ್ತೆ ವಿಸ್ತರಣೆಗೆ ವ್ಯಾಪಾರಸ್ಥರು ವಿರೋಧಿಸುತ್ತಿಲ್ಲ, ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿಯ ಜತೆಗೆ ಜೀವನೋಪಾಯಕ್ಕೂ ಅವಕಾಶ ಕಲ್ಪಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ ಎಂದರು.
ವ್ಯಾಪಾರಿ ವಿಂಪು ಸಂತೋಷ ಮಾತನಾಡಿ, ಹಲವು ವರ್ಷಗಳಿಂದ ಬೇಕರಿ ಸೇರಿದಂತೆ ವಿವಿಧ ವ್ಯಾಪಾರ ನಡೆಸುತ್ತಿರುವವರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ಯಾಂಕ್ ಹಾಗೂ ಸಂಘಗಳಿಂದ ಸಾಲ ಪಡೆದು ಅಂಗಡಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯವಿರುವಷ್ಟು ಜಾಗವನ್ನು ನಿಯಮಾನುಸಾರ ಬಿಟ್ಟುಕೊಡಲು ಸಿದ್ಧರಿದ್ದು, ತೆರವಿಗೆ ಸೂಕ್ತ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಚಿನ್ ಪ್ರಸಾದ್, ಸಫಿರ್, ಲೋಹಿತ್ ಇನ್ನಿತರರು ಇದ್ದರು.