ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಎಸ್‌ಡಿಪಿಐ ಪಕ್ಷದ ನೂತನ ಕಚೇರಿ ಗಣ್ಯರು ಉದ್ಘಾಟಿಸಿದರು.ನಿಂಗರಾಜು, ಅಂಗಡಿ ಚಂದ್ರು, ಇಮ್ರಾನ್, ಅರ್ಶದ್ ಅಹ್ಮದ್ ಮತ್ತಿತರರಿದ್ದರು.  
ಹಾಸನ

ಜನರ ಸಮಸ್ಯೆಗಳಿಗೆ ಧ್ವನಿಯಾಗಿರಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಡಿಪಿಐ ಪದಾಧಿಕಾರಿಗಳಿಗೆ ನಿಂಗರಾಜು ಸಲಹೆ
  • ನೂತನ ಕಚೇರಿ ಉದ್ಘಾಟನೆ
ಬೇಲೂರು: ಅರೇಹಳ್ಳಿ ಪಟ್ಟಣದ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಜನಪರ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಜತೆಗೆ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕಾರ್ಯಗಳನ್ನು ಮುಂದುವರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜು ಹೇಳಿದರು.
ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯರಸ್ತೆಯಲ್ಲಿ ಎಸ್‌ಡಿಪಿಐ ಪಕ್ಷದ ನೂತನ ಕಚೇರಿ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ನಾಡಕಚೇರಿಯಲ್ಲಿ ಹಕ್ಕುಪತ್ರ ವಿತರಣೆ ಸಂದರ್ಭ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ಆರೋಪ ಕೇಳಿಬಂದಾಗ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರಗತಿಪರ ಸಂಘಟನೆಗಳೊಂದಿಗೆ ಹೋರಾಟ ನಡೆಸಿದ್ದರು, ಅಲ್ಲದೆ ಕರೊನಾ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲೂ ಸಾರ್ವಜನಿಕರಿಗೆ ನೆರವಾಗಲು ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು, ಜನಪರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಮಾತನಾಡಿ, ಅರೇಹಳ್ಳಿಯಲ್ಲಿ ಪಕ್ಷ ಸಂಘಟನೆ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದೆ ಇನ್ನೂ ಹೆಚ್ಚಿನ ಕೆಲಸಗಳನ್ನು ಸಾರ್ವಜನಿಕರಿಗೆ ಮಾಡಿಸಿ ಕೊಡುವ ಮೂಲಕ ಸಂಘಟನೆಗೆ ಒತ್ತು ನೀಡಲಿದ್ದಾರೆ ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್, ಅರೇಹಳ್ಳಿ ಘಟಕದ ಅಧ್ಯಕ್ಷ ಅರ್ಶದ್ ಅಹ್ಮದ್, ಉಪಾಧ್ಯಕ್ಷ ಸಂಗಪ್ಪ, ಭೀಮ್ ಆರ್ಮಿ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.