ಅರಸೀಕೆರೆ ನಗರದಲ್ಲಿ ನಡೆದ ಬಸವ ಜಯಂತಿ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಅರಸೀಕೆರೆ: ವೀರಶೈವ ಲಿಂಗಾಯತ ಸಮಾಜ ಹಾಗೂ ಯುವಕರ ವತಿಯಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
ನಂದಿ ವಿಗ್ರಹಕ್ಕೆ ರುದ್ರಾಭಿಷೇಕ, ಬಿಲ್ವಪತ್ರೆ, ನಾಗದಳ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷ ಅರ್ಚನೆ ಸಲ್ಲಿಸಲಾಯಿತು. ಹಸಿರು ಹಾಗೂ ಬಣ್ಣಬಣ್ಣದ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ನಂದಿ ವಿಗ್ರಹ ಭಕ್ತರ ಮನ ಸೆಳೆಯಿತು.
ಬಸವೇಶ್ವರ ದೇವಾಲಯ ಬಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ, ಲಿಂಗವೀರರು, ಡೊಳ್ಳು ಕುಣಿತ ಹಾಗೂ ಮಹಿಳಾ ವೀರಗಾಸೆ ತಂಡ ಭಾಗವಹಿಸಿತ್ತು. ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಕಂಗೊಳಿಸಿದ್ದು, ಪಟಾಕಿ ಪ್ರದರ್ಶನ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿತು.
ಮಹಿಳೆಯರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡು ಜಯಘೋಷಗಳನ್ನು ಮೊಳಗಿಸಿ ನೃತ್ಯ ಮಾಡಿ ಗಮನ ಸೆಳೆದರು.ಅಶ್ವಾರೂಢ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಸಂಪನ್ನಗೊಂಡಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ, ಸಂಸ್ಥೆಯ ಪದಾಧಿಕಾರಿಗಳು ಹೆಜ್ಜೆ ಹಾಕಿದರು.