ಬಾಣಾವರದ ಕೋಟೆ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವರ ಮರು ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಕೆ.ಆರ್. ನಗರ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಹೊಸದುರ್ಗ ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ, ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಸಿ. ಶ್ರೀ ನಿವಾಸ ಮಾತನಾಡಿದರು. 
ಹಾಸನ

ಮೈಲಾರಲಿಂಗೇಶ್ವರ ಸ್ವಾಮಿ ಮರು ಪ್ರತಿಷ್ಠಾಪನೆ

ಎ. ಆರ್. ರಘುರಾಮ
ಅರಸೀಕೆರೆ ಗ್ರಾಮಾಂತರ: ಬಾಣಾವರದ ಕೋಟೆ ಬಡಾವಣೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ
ದೇವರ ಮರು ಪ್ರತಿಷ್ಠಾಪನೆ ಹಾಗೂ ದೇವಾಲಯದ ಜೀರ್ಣೋದ್ಧಾರ ಮಂಡಲ ಪೂಜೆಯ ಪ್ರಯುಕ್ತ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಕೆ.ಆರ್. ನಗರ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರೀತಿ ಮತ್ತು ವಿಶ್ವಾಸದ ಜೀವನಕ್ಕೆ ಹಾಲುಮತ ಸಮುದಾಯ ಮಾದರಿಯಾಗಿದೆ ಎಂದರು. ಮಠ ಮಾನ್ಯಗಳು ಸಮಾಜದಲ್ಲಿ ಶಾಂತಿ ಮತ್ತು ಪ್ರಗತಿಗೆ ಪ್ರೇರಕವಾಗಿದೆ. ಹಾಲುಮತ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿಯ ಪಥದಲ್ಲಿ ಸಾಗಬೇಕು ಎಂದರು.
ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಗುರು ಎಂದು ಕರೆಸಿಕೊಳ್ಳುವಂತಹ ಸ್ಥಾನ ದೊಡ್ಡದು. ಗುರುವೆಂದರೆ ಸರ್ವಧರ್ಮಕ್ಕೂ ಮಾರ್ಗದರ್ಶನ ನೀಡುವವರು. ಯಾವುದೇ ಮತದ ಗುರುವಾದರೂ ಅವರನ್ನು ಗೌರವಿಸುವುದು ಮನುಕುಲದ ಸಂಸ್ಕೃತಿಯಾಗಬೇಕು ಎಂದು ಹೇಳಿದರು.
ಹೊಸದುರ್ಗ ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ ಮಾತನಾಡಿ, ಯುವಜನರು ದುಶ್ಚಟಗಳಿಂದ ಮುಕ್ತರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು. ಪ್ರತಿಯೊಬ್ಬರೂ ತಂದೆ, ತಾಯಿಯ ಸೇವೆ ಮಾಡಬೇಕು. ಕುಟುಂಬದೊಂದಿಗೆ ಉತ್ತಮ ಬಾಂಧವ್ಯಇರಿಸಿಕೊಳ್ಳಬೇಕು. ಗುರುಗಳ ಕೃಪೆಯಿಂದ ಜ್ಞಾನ ಹಾಗೂ ಉತ್ತಮ ನಡವಳಿಕೆ ಲಭ್ಯವಾಗುತ್ತದೆ ಎಂದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಸಿ. ಶ್ರೀನಿವಾಸ ಮಾತನಾಡಿದರು. ಇದೇ ಸಂದರ್ಭದಲ್ಲಿ ಏಳು, ಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ದೇವಾಲಯದ ಗುರು ಕಪಿಲಮುನಿ ಗುರುಪೀಠದ ಗುರೂಜಿ ವೆಂಕಪ್ಪಯ್ಯ ಒಡೆಯರ್ ಹಾಗೂ ವಾರ್ಷಿಕ ವಂಶಪಾರಂಪರ್ಯ ಕಾರ್ಣಿಕ ನುಡಿಯುವ ರಾಮಪ್ಪಜ್ಜ ಮಾತನಾಡಿದರು. ಸಮುದಾಯದ ಮುಖಂಡರಾದ ಚಂದ್ರಪ್ಪ, ಭಾಸ್ಕರ್, ಲೋಕೇಶ್, ಶಿವಕುಮಾರ್, ಶ್ರೀಧರ್, ಕೃಷ್ಣಮೂರ್ತಿ, ಜಗದೀಶ್, ಭೂದೇವ ಒಡೆಯರ್ ನಿವೃತ್ತ ಸೈನಿಕರಾದ ಮೈಲಾರಪ್ಪ, ಬಸವರಾಜು, ಬೀರಪ್ಪ, ಯೋಗೇಶ್, ರಘು, ದೀಪಕ್, ಜಯಣ್ಣ ,ಮೋಹನ್ ಇದ್ದರು.