ಅರಕಲಗೂಡು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ರೈತರು ಮಂಗಳವಾರ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು. 
ಹಾಸನ

ರಾಮನಾಥಪುರ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಬೇಲ್ ಖರೀದಿ

ಪ್ರಮುಖ ಮುಖ್ಯಾಂಶಗಳು

  • ವರ್ತಕರು ವಿರುದ್ಧ ಘೋಷಣೆ ಕೂಗಿ ರೈತರ ಆಕ್ರೋಶ
ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಬೇಲ್ಗಳನ್ನು ಖರೀದಿಸಲಾಗುತ್ತಿದೆ ಎಂದು ಆರೋಪಿಸಿ ರೈತರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಯ ಫ್ಲಾಟ್‌ಫಾರ್ಮ್ 63ರಲ್ಲಿ ದೊಡ್ಡಮಗ್ಗೆ ಕ್ಲಸ್ಟರ್ ವ್ಯಾಪ್ತಿಯ ಮಗ್ಗೆ, ಅಲ್ಲಾಪಟ್ಟಣ, ಇಟಾಪಟ್ಟಣ, ಹೆಗ್ಗಡಿಹಳ್ಳಿ ಗ್ರಾಮದ ರೈತರು 700 ಬೇಲ್ಗಳನ್ನು ಮಾರಾಟಕ್ಕೆ ತಂದಿದ್ದರು. ಬೆಳಗ್ಗೆ ಹರಾಜು ಪ್ರಕ್ರಿಯೆ ಶುರುವಾಗಿ ವರ್ತಕರು 200 ಬೇಲ್ಗಳ ಬಿಡ್ ನಡೆಸಿದ್ದರು. ಸಾಕಷ್ಟು ಬೇಲ್‌ಗಳನ್ನು ಮನಸ್ಸೋಇಚ್ಛೆ ಕಡಿಮೆ ಬೆಲೆಗೆ ಕೊಳ್ಳಲಾರಂಭಿಸಿದ ವರ್ತಕರು ಮಧ್ಯಮ ಮತ್ತು ಕೆಳ ದರ್ಜೆಯ ಬೇಲ್ಗಳನ್ನು ಬಿಡ್ ಮಾಡದೆ ನಿರ್ಲಕ್ಷಿಸಿದರು. ಇದರಿಂದ ರೊಚ್ಚಿಗೆದ್ದ ರೈತರು, ವರ್ತಕರು ವಿರುದ್ಧ ಘೋಷಣೆ ಕೂಗಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.
ರೈತರ ಹಿತ ಕಾಯಬೇಕಿದ್ದ ತಂಬಾಕು ಆಡಳಿತ ಮಂಡಳಿ ವರ್ತಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರಿಂದ ಬೇಕಾಬಿಟ್ಟಿ ದರಕ್ಕೆ ಖರೀದಿಸಲಾಗುತ್ತಿದೆ. ಇದಕ್ಕೆ ಮಾರುಕಟ್ಟೆ ಸಿಬ್ಬಂದಿ ವರ್ತಕರಿಗೆ ಸಾಥ್ ನೀಡುತ್ತಿದ್ದು, ರೈತರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ. ಉತ್ತಮ ದರ್ಜೆಯ ತಂಬಾಕಿನ ಬೆಲೆ ಸ್ಥಿರತೆ ಕಾಯ್ದುಕೊಂಡಿಲ್ಲ. ಬೆಲೆ ಇಳಿಕೆ ಮಾಡಿ ಅನ್ಯಾಯ ಮಾಡಲಾಗುತ್ತಿದೆ. ಮಾರಾಟಕ್ಕೆ ಬೇಲ್ಗಳನ್ನು ತಂದು ಮಾರುಕಟ್ಟೆಯಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆ ಹರಾಜು ಸ್ಥಗಿತಗೊಳಿಸಿ ಕಚೇರಿಗೆ ಮುತ್ತಿಗೆ ಹಾಕಿ ತಂಬಾಕು ಮಂಡಳಿ ದುರಾಡಳಿತ ಹಾಗೂ ವರ್ತಕರ ವಿರುದ್ಧ ಘೋಷಣೆ ಕೂಗಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಂಬಾಕು ಮಾರುಕಟ್ಟೆ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ಮಾತನಾಡಿ, ಮಧ್ಯಮ ಮತ್ತು ಕೆಳ ದರ್ಜೆಯ ತಂಬಾಕು ಖರೀದಿಗೆ ವರ್ತಕರು ಸ್ಯಾಂಪಲ್ ಕಳುಹಿಸಿದ್ದು, ಸದ್ಯದಲ್ಲೇ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ರೈತರ ಮನವೊಲಿಸಲು ಮುಂದಾದರು.
ಇದಕ್ಕೆ ಒಪ್ಪದ ರೈತರು ತಂಬಾಕಿಗೆ ವೈಜ್ಞಾನಿಕ ಬೆಲೆ ನೀಡಿ ಖರೀದಿಸಬೇಕು ಎಂದು ಪಟ್ಟು ಹಿಡಿದರು. ಬುಧವಾರ ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ನಿಮಿತ್ತ ಮಾರುಕಟ್ಟೆ ಹರಾಜಿಗೆ ರಜೆ ನೀಡಲಾಗಿದ್ದು ಬೇಲ್ಗಳನ್ನು ತಂದ ರೈತರನ್ನು ತ್ರಿಶಂಕು ಸ್ಥಿತಿಗೆ ದೂಡಲಾಗಿದೆ ಎಂದು ಬೆಳೆಗಾರರು ನಿರಾಸೆಯಿಂದ ಮರಳಿದರು.