ಅಕ್ರಮ ಗೋ ಮಾಂಸ ಸಾಗಾಟ ಮಾಡಿದವನನ್ನು ಸಾಕ್ಷಿ ಸಮೇತ ಹಿಡಿದರೂ ಶಿಕ್ಷೆಗೆ ಗುರಿಪಡಿಸುವ ಬದಲು ಪೊಲೀಸರು ಜಾಮೀನು ಮಂಜೂರು ಮಾಡಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹಿಂದೂಪರ ಸಂಘಟನೆ ಕಾರ್ಯಕರ್ತರಾದ ಲೋಕೇಶ್, ಅಭಿ, ಧರ್ಮನಾಯ್ಕ ಇತರರು ಇದ್ದರು. 
ಹಾಸನ

ಆರೋಪಿಗೆ ಶಿಕ್ಷೆಯ ಬದಲು ಜಾಮೀನು

ಪ್ರಮುಖ ಮುಖ್ಯಾಂಶಗಳು

  • ಆರೋಪಿಗೆ ಶಿಕ್ಷೆಯ ಬದಲು ಜಾಮೀನು
  • ಪೊಲೀಸರ ವಿರುದ್ಧ ಹಿಂದುಪರ ಕಾರ್ಯಕರ್ತರ ಆರೋಪ
  • ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ
ಹಾಸನ: ಗೋ ಮಾಂಸ ಸಾಗಾಟ ಮಾಡಿದವನನ್ನು ಸಾಕ್ಷಿ ಸಮೇತ ಹಿಡಿದರೂ ಶಿಕ್ಷೆಗೆ ಗುರಿಪಡಿಸುವ ಬದಲು ಪೊಲೀಸರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ನಗರದ ಸಂತೆಪೇಟೆಯಲ್ಲಿ ಗುರುವಾರ ಮಧ್ಯಾಹ್ನ ಹೊಳೆನರಸೀಪುರದಿಂದ ಗೋಮಾಂಸ ತರುತ್ತಿದ್ದ ಬುಲೆರೋ ಪಿಕ್‌ಅಪ್ ವಾಹನ ತಡೆದು ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂಬಂಧ ವಾಹನವನ್ನು ವಶಕ್ಕೆ ಪಡೆದಿದ್ದ ನಗರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿದ್ದರು. ಆದರೆ ಮಾರನೇ ದಿನವೇ ಜಾಮೀನು ನೀಡಿ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. 2021ರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಪ್ರಕಾರ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬಹುದು. ಜನಪ್ರತಿನಿಧಿಯೊಬ್ಬರ ಸೂಚನೆ ಮೇರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.
ಹಿಂದುಪರ ಸಂಘಟನೆ ಕಾರ್ಯಕರ್ತರಾದ ಲೋಕೇಶ್, ಅಭಿ, ಧರ್ಮನಾಯ್ಕ ಹಾಗೂ ಇತರರು ವೃತ್ತ ನಿರೀಕ್ಷಕ ಗಂಗಾಧರಪ್ಪ ಅವರೊಂದಿಗೆ ವಾಗ್ವಾದ ನಡೆಸಿದರು. ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತಿದ್ದರೂ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆ. ನಾವೇ ಖುದ್ದಾಗಿ ವಾಹನ ವಶಕ್ಕೆ ಪಡೆದರೂ ಪೊಲೀಸರು ಒಂದು ಗಂಟೆ ತಡವಾಗಿ ಸ್ಥಳಕ್ಕೆ ಬಂದರು. ಸುಮೊಟೊ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಿದರು.
ವೃತ್ತ ನಿರೀಕ್ಷಕ ಗಂಗಾಧರಪ್ಪ ಮಾತನಾಡಿ, ಗೋಮಾಂಸ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆಯಲಾಗಿದೆ. ಪಶು ವೈದ್ಯಾಧಿಕಾರಿಗಳು ಮಾಂಸದ ಪರೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ತಿಳಿಸಿದರು. ಬಳಿಕ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.