ನವಿಲೇ ಗ್ರಾಮದಲ್ಲಿ ಕೆಎಂಎಫ್ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಎನ್.ಪರಮೇಶ್, ಸದಾಶಿವಪ್ಪ, ನಾಗಭೂಷಣ್, ಬಸವರಾಜು, ಸಿದ್ದೇಶ್ ಶಾಸ್ತ್ರಿ, ಗಿರೀಶ್ ಇದ್ದರು.
ಬಾಗೂರು: ಹಾಸನದಲ್ಲಿ ಸುಮಾರು 66 ಎಕರೆ ಪ್ರದೇಶದಲ್ಲಿ 900 ಕೋಟಿ ರೂ.ವೆಚ್ಚದಲ್ಲಿ ಕೆಎಂಎಫ್ ಮೆಗಾ ಡೈರಿ ನಿರ್ಮಾಣವಾಗುತ್ತಿದ್ದು, ಆರಂಭಿಕ ಹಂತದಲ್ಲಿ ಪ್ರತಿದಿನ 10 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ನವಿಲೇ ಗ್ರಾಮದಲ್ಲಿ ಕೆಎಂಎಫ್ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಡೈರಿಯ ಸಂಸ್ಕರಣಾ ಸಾಮರ್ಥ್ಯವನ್ನು 15 ಲಕ್ಷ ಲೀಟರ್‌ಗೆ ವಿಸ್ತರಿಸಲಾಗುವುದು. ಪ್ರತಿದಿನ 60 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದಿಸುವ ಘಟಕವೂ ಆರಂಭವಾಗಲಿದೆ. 93 ಬಗೆಯ ಐಸ್‌ಕ್ರೀಂ, ನಂದಿನಿ ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದರು.
ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಮಾರಾಟ ಮಾಡಲು ಮಾರುಕಟ್ಟೆ ಅವಕಾಶ ಕಲ್ಪಿಸಲಾಗುವುದು. ನಾಗೇಶ್ವರಸ್ವಾಮಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ನಂದಿನಿ ಹಾಲಿನ ಉತ್ಪನ್ನಗಳು ಕಡಿಮೆ ದರದಲ್ಲಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ನಾಗೇಶ್ವರಸ್ವಾಮಿ ಕ್ಷೇತ್ರದ ಕಲ್ಯಾಣ ಮಂಟಪದ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ, ವಿಶ್ರಾಂತಿ ಕೊಠಡಿಗಳು, ಉದ್ಯಾನವನ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಪ್ರಸಾದ ವಿತರಣಾ ಕೇಂದ್ರ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.ನಿವೃತ್ತ ಇಂಜಿನಿಯರ್ ಸದಾಶಿವಪ್ಪ, ನಾಗಭೂಷಣ್, ತಾಪಂ ಮಾಜಿ ಸದಸ್ಯ ಎನ್.ಬಸವರಾಜು, ಇಟ್ಟಿಗೆ ಕುಮಾರ್, ನಾಗರಾಜ್, ನಾರಾಯಣ, ಪಟೇಲ್ ಮಂಜುನಾಥ್, ಬೈಫ್ ಗಿರೀಶ್, ಸಿದ್ದೇಶ್ ಶಾಸ್ತ್ರಿ, ರವಿ, ದಿನೇಶ್, ನವೀನ್‌ಕುಮಾರ್ ಇತರರಿದ್ದರು.