ಅರಸೀಕೆರೆ ತಾಲೂಕಿನ ಕಣಕಟ್ಟೆ ಕೆರೆಗೆ ಶಾಸಕ ಶಿವಲಿಂಗೇಗೌಡ ಶುಕ್ರವಾರ ಬಾಗಿನ ಅರ್ಪಿಸಿದರು. ಸತೀಶ್, ಅತೀಕ್, ಮಲ್ಲೇಶಪ್ಪ, ಮಹೇಶ್, ಮಲ್ಲಿಕಾ ಇತರರು ಹಾಜರಿದ್ದರು.  
ಹಾಸನ

ಕೃಷಿ ಭೂಮಿಗೆ ಸಮೃದ್ಧ ನೀರು

ಅರಸೀಕೆರೆ ಗ್ರಾಮಾಂತರ: : ರೈತರ ಕೃಷಿ ಭೂಮಿಗೆ ಸಮೃದ್ಧವಾಗಿ ನೀರು ಒದಗಿಸಲು ಕ್ಷೇತ್ರದಲ್ಲಿ ಕ್ರಮ ವಹಿಸಿದ್ದರಿಂದ ನೀರಾವರಿ ಕ್ರಾಂತಿಯಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ತಾಲೂಕಿನ ಹೊನ್ನವಳ್ಳಿ ಏತ ನೀರಾವರಿ ಮೂಲಕ ಕಣಕಟ್ಟೆ ಹೋಬಳಿ ವ್ಯಾಪ್ತಿಯೊಳಗೆ ಹೊಳಲ್ಕೆರೆ, ಹರಳಕಟ್ಟ, ಡಿ.ಎಂ.ಕುರ್ಕೆ, ಚಿಕ್ಕೊಂಡಿಹಳ್ಳಿ, ಮಾಡಾಳು, ಸಾತನಗೆರೆ ಹಾಗೂ ಕಣಕಟ್ಟೆ ಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.ಸದನದ ಒಳಗೆ ಮತ್ತು ಹೊರಗೆ ನಡೆಸಿದ ಹೋರಾಟದ ಫಲವಾಗಿ ಹೇಮಾವತಿ ನದಿ ಮೂಲದಿಂದ ತಾಲೂಕಿಗೆ ಪ್ರತ್ಯೇಕ ಕೊಳವೆ ಅಳವಡಿಸಿ ಜಲ ಕೊಡುವಂತೆ ಅಂದಿನ ಬಿಜೆಪಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೆ. ಅದರ ಫಲವಾಗಿ ಇಂದು ಕಣಕಟ್ಟೆ ಹೋಬಳಿಯ ಹತ್ತಾರು ಕೆರೆ-ಕಟ್ಟೆಗಳಲ್ಲಿ ಹೇಮಾವತಿ ನದಿ ನೀರು ತುಂಬಿ ಹರಿಯುತ್ತಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂ.ಎಸ್.ವಿ. ಸ್ವಾಮಿ, ಮಾತನಾಡಿ, ವನವಳ್ಳಿ ಏತ ನೀರಾವರಿ ಯೋಜನೆ ಸಾಕಾರಗೊಂಡಿದ್ದರ ಹಿಂದೆ ಶಾಸಕರ ಹೋರಾಟ ಸಾಕಷ್ಟಿದೆ. ಈ ಯೋಜನೆಯಿಂದ ಕಣಕಟ್ಟೆ ಹೋಬಳಿಗೆ ವರದಾನವಾಗಿದೆ ಎಂದರು.
ಕೊಳವೆಬಾವಿಗಳ ಆಶ್ರಯದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೂ ಸಾಕಷ್ಟು ಲಾಭದಾಯವಾಗಲಿದೆ ಎಂದರು. ಹೇಮಾವತಿ ಜಲಾಶಯದ ಎಇಇ ನಾಗಭೂಷಣ, ರಾಂಪುರ ಗ್ರಾ.ಪಂ. ಅಧ್ಯಕ್ಷ ಸುರೇಶ, ಡಿ.ಎಂ.ಕುರ್ಕೆ ಸೊಸೈಟಿ ಅಧ್ಯಕ್ಷ ಸುರೇಶ, ಮಾಜಿ ತಾಪಂ ಅಧ್ಯಕ್ಷ ನಂಜುಂಡಪ್ಪ, ಮುಖಂಡರಾದ ಮೈಲಾರಪ್ಪ, ತುಂಬಾಪುರ ನವೀನ, ಜೆ.ಸಿ.ಪುರ ಮಾಯಣ್ಣ, ಕರಿಯಪ್ಪ, ಕಣಕಟ್ಟೆ ಸತೀಶ್, ಮಲ್ಲೇಶಪ್ಪ, ಮಲ್ಲಿಕಾ ಇತರರು ಇದ್ದರು.