ಹಾಸನ ನಗರದ ಎವಿಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಭಾರತ್ ಸೇವಾದಳದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮನೋವೈದ್ಯೆ ಡಾ.ನಿರುಪಮಾ, ಡಾ.ಸೀ.ಚ.ಯತೀಶ್ವರ್, ಎಸ್.ಎಚ್.ವಾರಿಜ, ವಿ.ಎಸ್.ರಾಣಿ ಇತರರಿದ್ದರು. 
ಹಾಸನ

ಹೆಣ್ಣುಮಕ್ಕಳ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • girls' mental health
ಹಾಸನ: ವೇಗದ ಜೀವನಶೈಲಿ ಮತ್ತು ಸಾಮಾಜಿಕ ಒತ್ತಡಗಳ ನಡುವೆ ವಿದ್ಯಾರ್ಥಿಗಳ, ವಿಶೇಷವಾಗಿ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅತ್ಯಗತ್ಯವಾಗಿದೆ ಎಂದು ಮನೋವೈದ್ಯೆ ಡಾ.ನಿರುಪಮಾ ಅಭಿಪ್ರಾಯಪಟ್ಟರು.
ನಗರದ ಎವಿಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಭಾರತ್ ಸೇವಾದಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬದಲ್ಲಿ ಸಣ್ಣ ವಿಷಯಕ್ಕೂ ವಿರೋಧ ವ್ಯಕ್ತವಾದಾಗ ಕೆಲ ಯುವತಿಯರು ಮನಸ್ಥೈರ್ಯ ಕಳೆದುಕೊಂಡು ತಮ್ಮ ಮೇಲೆ ತಾವೇ ಹಿಂಸೆ ಮಾಡಿಕೊಳ್ಳುವ ಪ್ರವೃತ್ತಿಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ನಡೆ ವ್ಯಕ್ತಿತ್ವದ ದೌರ್ಬಲ್ಯವನ್ನು ಸೂಚಿಸಿದರೂ, ಅದನ್ನು ಅರಿತು ಸರಿಯಾದ ಮಾರ್ಗದರ್ಶನ ನೀಡುವುದರಿಂದ ಅವರ ಜೀವನವನ್ನು ಸುಧಾರಿಸಬಹುದು ಎಂದು ಹೇಳಿದರು.
ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್ ಮಾತನಾಡಿ, ಸ್ವಾಭಿಮಾನ ಮತ್ತು ವೈಚಾರಿಕತೆ ಇಲ್ಲದೆ ವ್ಯಕ್ತಿಯೂ, ಸಮಾಜವೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿ ಸಮುದಾಯ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ತಮ್ಮ ಅಮೂಲ್ಯ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದು, ಇದು ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಎಸ್.ಎಚ್.ವಾರಿಜಾ, ಭಾರತ್ ಸೇವಾದಳ ವಲಯ ಸಂಘಟಕಿ ವಿ.ಎಸ್.ರಾಣಿ ಕಾಲೇಜಿನ ಬೋಧಕ ವೃಂದ, ವಿದ್ಯಾರ್ಥಿನಿಯರು ಇದ್ದರು.