ಹೊಳೆನರಸೀಪುರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಣೆ ಮತ್ತು ಬಾಲ್ಯವಿವಾಹ ಕುರಿತ ಜಾಗೃತಿ ಕಾರ್ಯಕ್ರಮವನ್ನು ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಉದ್ಘಾಟಿಸಿದರು. ಸುರೇಶ್, ಪಾಲಾಕ್ಷ, ಶಿವಕುಮಾರ್ ಇತರರು ಇದ್ದರು.
ಹೊಳೆನರಸೀಪುರ : ಬಾಲ್ಯವಿವಾಹ, ಮಾನವ ಕಳ್ಳಸಾಗಣೆಗಳ ತಡೆಗೆ ಕಾನೂನಿನ ಅರಿವು ಮತ್ತು ಸಾಮಾಜಿಕ ಜಾಗೃತಿ ಅಗತ್ಯ ಎಂದು ಸೆಷನ್ಸ್ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಹೇಳಿದರು.
ತಾಲೂಕು ಆಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ 14 ವರ್ಷದೊಳಗಿನ ಪ್ರತಿ ಮಗುವಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ಇದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಕಠಿಣ ಕಾನೂನುಗಳಿದ್ದರೂ ಮಾನವ ಕಳ್ಳಸಾಗಣೆ ಮತ್ತು ಬಾಲ್ಯವಿವಾಹದಂತಹ ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಕಾನೂನು ಜಾರಿಯೊಂದಿಗೆ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಿ ಇಂತಹ ಕೃತ್ಯಗಳನ್ನು ತಡೆಯಲು ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ ಮಾತನಾಡಿ ಸಾಮಾಜಿಕ ಜಾಲತಾಣದ ಬಳಕೆಯಿಂದ ಯುವ ಜನತೆಯಲ್ಲಿ ದುಷ್ಪರಿಣಾಮ ಹೆಚ್ಚಾಗುತ್ತಿದೆ. ಈ ವಿಷಯವಾಗಿ ಎಚ್ಚರಿಕೆ ವಹಿಸಬೇಕು ಎಂದರು. ಮಾನವ ಕಳ್ಳಸಾಗಣೆ ಹಿಂದಿರುವ ದುಷ್ಕೃತ್ಯಗಳು ಹಾಗೂ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಕೀಲರಾದ ಕೆ.ಎಸ್. ಬಿಂದೇಶ್ವರಿ ಮಹಿಳೆಯರ ಸುರಕ್ಷತೆ, ಕಾನೂನು ಸೌಲಭ್ಯಗಳು ಹಾಗೂ ತುರ್ತು ನೆರವು ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪ ಪ್ರಾಂಶುಪಾಲ(ಪ್ರಭಾರಿ) ಶಿವಣ್ಣ, ಪಾಲಾಕ್ಷ ಇತರರು ಇದ್ದರು.