ಆಲೂರು ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್ ಉದ್ಘಾಟಿಸಿ ಮಾತನಾಡಿದರು. ಪ್ರಭಾರ ಮುಖ್ಯ ಶಿಕ್ಷಕ ಕೆ.ಆರ್ ರಘು, ಶಿಕ್ಷಕರಾದ ಭವಾನಿ, ಜಿ.ಕೆ ನಾಗರಾಜ್, ಎಂ.ಡಿ ಯೋಗೇಶ್ ಇದ್ದರು.  
ಹಾಸನ

ಮಕ್ಕಳಿಗೆ ಕಾನೂನು ಅರಿವು ಅಗತ್ಯ

ಎ. ಆರ್. ರಘುರಾಮ
ಆಲೂರು : ಮಕ್ಕಳಿಗೆ ಶಿಕ್ಷಣದೊಂದಿಗೆ ಕಾನೂನಿನ ಕನಿಷ್ಠ ಅರಿವೂ ಇರಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ತಿಳಿವಳಿಕೆಗಳ ಕೊರತೆ ಹಾಗೂ ಅದಕ್ಕೆ ಅಗೌರವ ತೋರದ ವ್ಯಕ್ತಿಗಳಿಂದ ದೇಶದಲ್ಲಿಅನಗತ್ಯ ಸಂಘರ್ಷ ನಡೆಯುತ್ತಿವೆ.
ಇನ್ನೊಂದೆಡೆ ದೇಶಕ್ಕೆ ದ್ರೋಹ ಎಸಗುವ ಭಯೋತ್ಪಾದಕರ ಗುಂಪೊಂದು ಸೃಷ್ಟಿಯಾಗುತ್ತಿದೆ ಎಂಬ ಆತಂಕವೂ ಕಾಡುತ್ತಿದೆ. ಹೀಗಾಗಿ ಕಾನೂನು ತಿಳಿವಳಿಕೆಗೆ ಇತ್ತೀಚಿನ ದಿನದಲ್ಲಿ ಮಹತ್ವ ಹೆಚ್ಚಾಗಿದೆ ಎಂದರು.
ಆಲೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಶಶಿಕುಮಾರ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಶಾಲಾ ಆಡಳಿತ ಮಂಡಳಿ ನಿಗಾ ವಹಿಸಬೇಕು ಎಂದರು.
ಶಾಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಪಾಯಕಾರಿ
ಮೊಬೈಲ್ ಆ್ಯಪ್‌ಗಳಿಂದ ಮಕ್ಕಳು ದೂರ ಇರುವಂತೆ ಜಾಗೃತಿ ಮೂಡಿಸಬೇಕು.
ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರು ಆಗಾಗ್ಗೆ ವಿದ್ಯಾರ್ಥಿಗಳ ಮೊಬೈಲ್ ಚಟುವಟಿಕೆಗಳನ್ನು ಗಮನಿಸುತ್ತಿರಬೇಕು. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಪ್ರಭಾರ ಮುಖ್ಯ ಶಿಕ್ಷಕ ಕೆ.ಆರ್ ರಘು, ಶಿಕ್ಷಕರಾದ ಭವಾನಿ, ಜಿ.ಕೆ ನಾಗರಾಜ್, ಎಂ.ಡಿ ಯೋಗೇಶ್, ದ್ವಿತೀಯ ದರ್ಜೆ ಸಹಾಯಕಿ ಸುಕನ್ಯಾ ಮುಂತಾದವರು ಹಾಜರಿದ್ದರು.