ಆಟೋ ಗ್ಯಾಸ್ ಅಭಾವ ಹಾಗೂ ದರ ಏರಿಕೆ ಖಂಡಿಸಿ ಆಟೋ ಚಾಲಕರು ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. 
ಹಾಸನ

ಆಟೋ ಚಾಲಕರ ಪ್ರತಿಭಟನೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಆಟೋ ಚಾಲಕರ ಪ್ರತಿಭಟನೆ
  • ಗ್ಯಾಸ್ ಅಭಾವ, ದರ ಏರಿಕೆಗೆ ವಿರೋಧ
ಹಾಸನ: ಆಟೋ ಗ್ಯಾಸ್ ಅಭಾವ ಹಾಗೂ ದರ ಏರಿಕೆ ಖಂಡಿಸಿ ಆಟೋ ಚಾಲಕರು ಶನಿವಾರ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಆಟೋ ಚಾಲಕ ಕಿರಣ್ ಮಾತನಾಡಿ, ಇಸ್ರೇಲ್, ಅಮೆರಿಕ, ಇರಾನ್ ಯುದ್ಧದ ನಡುವೆ ಆಟೋ ಗ್ಯಾಸ್ ಸಮಸ್ಯೆ ಉಂಟಾಗಿ ಚಾಲಕರ ಪಾಡು ಹೇಳ ತೀರದಾಗಿದೆ. ಆಟೋಗಳನ್ನೇ ನಂಬಿಕೊಂಡು ಬದುಕುತ್ತಿರುವ ನಮ್ಮ ಜೀವನ ಮೂರಾಬಟ್ಟೆಯಾಗಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ತುರ್ತು ಗಮನಹರಿಸುವ ಅಗತ್ಯವಿದೆ ಎಂದರು.
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಪ್ರತಿಯೊಂದು ಆಟೋಗಳನ್ನು ಅವಲಂಬಿಸಿರುವ ಆಟೋ ಚಾಲಕರ ಕುಟುಂಬಗಳು ಇಂದು ಬೀದಿ ಪಾಲಾಗುವ ಪರಿಸ್ಥಿತಿಗೆ ಬಂದಿವೆ. ಒಂದಡೆ ಆಟೋ ಗ್ಯಾಸ್ ಅಭಾವ ಹೆಚ್ಚಾಗಿದ್ದು, ಹಣ ಕೊಟ್ಟರೂ ಗ್ಯಾಸ್ ಸಿಗುತ್ತಿಲ್ಲ ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಇನ್ನೊಂದೆಡೆ ಆಟೋ ಗ್ಯಾಸ್ ಬೆಲೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಇದೂ ಕೂಡ ನಮಗೆ ಸಮಸ್ಯೆಯಾಗಿದೆ. ಅಲ್ಲದೆ ನಾವು ಕೇಳಿದಷ್ಟು ಆಟೋ ಗ್ಯಾಸ್ ಇಲ್ಲದಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಬೆಲೆ ಏರಿಕೆಯಿಂದ ದಿನಕ್ಕೆ ನೂರು ರೂಪಾಯಿ ದುಡಿಯುವುದು ಕೂಡ ಕಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರು ನಮಗೆ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಆಟೋ ಚಾಲಕರ ಸಂಘದ ರಾಹುಲ್, ಪ್ರದೀಪ್, ರಾಕೇಶ್, ದಿಲೀಪ್, ವಸಂತಕುಮಾರ್, ಕುಮಾರ್ ಇತರರಿದ್ದರು.