ಹಾಸನ ನಗರದ ಅರಳೀಕಟ್ಟೆ ವೃತ್ತದ ಬಳಿ ಸಿಂಹಾಸನಪುರಿ ಆಟೋ ಚಾಲಕರ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ದಿಲೀಪ್, ಕಂಚಮಾರನಹಳ್ಳಿ ಕಾಂತರಾಜು, ಆನಂದ್, ಹರೀಶ್, ಮಂಜು, ರಮೇಶ್, ಯೋಗೀಶ್ ಇತರರಿದ್ದರು. 
ಹಾಸನ

ದರ ಏರಿಕೆಯಿಂದ ಆಟೋ ಚಾಲಕರಿಗೆ ಸಂಕಷ್ಟ

ಪ್ರಮುಖ ಮುಖ್ಯಾಂಶಗಳು

  • ದರ ಏರಿಕೆಯಿಂದ ಆಟೋ ಚಾಲಕರಿಗೆ ಸಂಕಷ್ಟ
  • ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
  • ಎಚ್.ಕೆ.ದಿಲೀಪ್ ಎಚ್ಚರಿಕೆ
ಹಾಸನ: ಇಂಧನ ದರ ಏರಿಕೆ, ಸರ್ಕಾರಿ ಸೇವೆಗಳ ಶುಲ್ಕ ಹೆಚ್ಚಳ ಹಾಗೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಆದಾಯದಿಂದ ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದರೆ ರಾಜ್ಯದ 27 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ಒಗ್ಗೂಡಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸಿಂಹಾಸನಪುರಿ ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ದಿಲೀಪ್ ಎಚ್ಚರಿಕೆ ನೀಡಿದರು.
ನಗರದ ಅರಳೀಕಟ್ಟೆ ವೃತ್ತದ ಬಳಿ ಸಿಂಹಾಸನಪುರಿ ಆಟೋ ಚಾಲಕರ ಸಂಘವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಎರಡು ತಿಂಗಳಿನಿಂದ ಎಲ್‌ಪಿಜಿ ಹಾಗೂ ಪೆಟ್ರೋಲ್ ದರ ಏರಿಕೆಯಾಗುತ್ತಿದ್ದು, ಆಟೋ ಚಾಲಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಇಂಧನ ವೆಚ್ಚ ಹೆಚ್ಚಾದರೂ ಬಾಡಿಗೆ ದರದಲ್ಲಿ ಹೆಚ್ಚಳವಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜತೆಗೆ ಆರ್‌ಟಿಒ ಕಚೇರಿ, ನೋಂದಣಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳ ಶುಲ್ಕದಲ್ಲೂ ಗಣನೀಯ ಏರಿಕೆಯಾಗಿದ್ದು, ಚಾಲಕರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಿದೆ ಎಂದರು.
ಒಂದು ಲೀಟರ್ ಗ್ಯಾಸ್ ಬೆಲೆ 100 ರೂ. ದಾಟಿರುವ ಪರಿಸ್ಥಿತಿಯಲ್ಲಿ ಆಟೋ ಓಡಿಸಿ ಜೀವನ ಸಾಗಿಸುವುದೇ ಕಷ್ಟವಾಗಿದೆ. ಸಣ್ಣಪುಟ್ಟ ಬಾಡಿಗೆಗಳನ್ನೇ ಅವಲಂಬಿಸಿ ಬದುಕುತ್ತಿರುವ ಚಾಲಕರಿಗೆ ಈ ಪರಿಸ್ಥಿತಿ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ ಎಂದರು.
ಕಂಚಮಾರನಹಳ್ಳಿ ಕಾಂತರಾಜು ಮಾತನಾಡಿ, ಸಂಘ ಆಟೋ ಚಾಲಕರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ಸಂಘದ ಆನಂದ್, ಹರೀಶ್, ಮಂಜು, ರಮೇಶ್, ಯೋಗೀಶ್, ಚಂದ್ರು ಅಪ್ಪಿ, ಸುರೇಶ್, ತೌಸಿಫ್ ಇಬ್ರಾಹಿಂ, ಕುಮಾರ್, ನಾಗರಾಜು, ರಘು, ಪ್ರೀತಮ್, ರಂಗನಾಥ್, ವಸಂತಕುಮಾರ್, ಕಿರಣ್, ಅಶೋಕ್, ನಯನಾ ಇತರರಿದ್ದರು.