ಎಚ್.ಡಿ.ರೇವಣ್ಣ  
ಹಾಸನ

ತಾಯಿ ನೆನೆದು ಬಿಕ್ಕಿಬಿಕ್ಕಿ ಅತ್ತ ಎಚ್.ಡಿ.ರೇವಣ್ಣ

ಪ್ರಮುಖ ಮುಖ್ಯಾಂಶಗಳು

  • ತಾಯಿ ನೆನೆದು ಬಿಕ್ಕಿಬಿಕ್ಕಿ ಅತ್ತ ಎಚ್.ಡಿ.ರೇವಣ್ಣ
  • ನಮ್ಮ ಕುಟುಂಬ ಏಳಿಗೆಗೆ ಚೆನ್ನಮ್ಮನೇ ಕಾರಣ ಎಂದ ಪುತ್ರ
ಹಾಸನ: ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ ಪುತ್ರ, ಶಾಸಕ ಎಚ್.ಡಿ.ರೇವಣ್ಣ, ತಾಯಿಯಿಂದಲೇ ತಮ್ಮ ಕುಟುಂಬ ಈ ಹಂತಕ್ಕೆ ಬೆಳೆಯಲು ಕಾರಣವಾಯಿತು ಎಂದು ಭಾವುಕರಾಗಿ ಹೇಳಿದರು.
ಸಾಮಾನ್ಯ ಪಟೇಲ್ ಕುಟುಂಬದಲ್ಲಿ ಹುಟ್ಟಿದರೂ, ನಮ್ಮ ತಂದೆ ಏಳಿಗೆಯಲ್ಲಿ, ನಮ್ಮ ಬೆಳವಣಿಗೆಯಲ್ಲಿ ನಮ್ಮ ತಾಯಿ ಪಾತ್ರ ಪ್ರಮುಖವಾಗಿದೆ ಎಂದು ಮಾತಿನ ನಡುವೆ ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಹಾಗೆಯೇ ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು, ಮನೆಗೆ ಯಾರೇ ಬರಲಿ ಊಟ ಹಾಕುತ್ತಿದ್ದರು. ಆ ದೇವತೆಯನ್ನು ಕಳೆದು ಕೊಂಡ ದುಃಖ ತಡೆಯಲಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನ್ನ ಹಾಕುವುದರ ಜತೆಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ, ಕೆಲಸ ಕೊಡಿಸಿದ್ದಾರೆ, ಸಂಪೂರ್ಣ ಸಸ್ಯಾಹಾರಿಯಾಗಿ ನಿತ್ಯ ದೇವರ ಪೂಜೆ ಮಾಡುತ್ತಿದ್ದರು. ಎಲ್ಲ ಮಂತ್ರಗಳನ್ನು ಹೇಳುತ್ತಿದ್ದರು. ಅಂತ್ಯಕ್ರಿಯೆಗೆ ಬಹುತೇಕ ಮಠಗಳ ಸ್ವಾಮೀಜಿಗಳು, ಪಕ್ಷಾತೀತವಾಗಿ ರಾಜ್ಯದ ಮುಖ್ಯಮಂತ್ರಿ ಸೇರಿ ಕೇಂದ್ರ ಮತ್ತು ರಾಜ್ಯ ಸಚಿವರು, ಎಲ್ಲ ರಾಜಕಾರಣಿಗಳು ಆಗಮಿಸಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು, ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಸ್ವತಃ ಐಜಿ ಅವರೇ ಆಗಮಿಸಿದ್ದರು. ಹಾಗೆಯೇ ಮಾಧ್ಯಮಗಳು ಸಾಕಷ್ಟು ಸಹಕಾರ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ಎಲ್ಲರ ಉಪಕಾರ ಎಂದೂ ಮರೆಯುವುದಿಲ್ಲ ಎಂದರು.
ಶನಿವಾರ ಸುಮಾರು 3.45 ರ ಸುಮಾರಿಗೆ ತಂದೆಯವರು ದೇವರ ಪ್ರಸಾದ ಕೊಟ್ಟು, ಹಣೆಗೆ ಕುಂಕುಮ ಹಚ್ಚಿ, ಹೂ ಮುಡಿಸಿದ ಕೂಡಲೇ ನಮ್ಮ ತಾಯಿ ಕೊನೆಯುಸಿರೆಳೆದರು ಎಂದ ರೇವಣ್ಣ, ಇಂತಹ ಸಾವು ಯಾರಿಗೂ ಸಿಗುವುದಿಲ್ಲ. ಅದಕ್ಕೂ ಮುನ್ನ ತಾವು ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದರೂ, ಪ್ರಸಾದ ಕೊಡಲಾಗಲಿಲ್ಲ ಎಂದು ಮರುಗಿದರು.
30ರಂದು ಆರಾಧನಾ ಮಹೋತ್ಸವ:
ಜಿಲ್ಲೆಯ ಜನರನ್ನು ನಾನು ಯಾವತ್ತೂ ಮರೆಯುವುದಿಲ್ಲ, ಅವರಿಗೂ ಧನ್ಯವಾದಗಳು. ಜು.30ರಂದು ತಾಯಿಯ ಆರಾಧನಾ ಮಹೋತ್ಸವ ನಡೆಯಲಿದ್ದು, ಪ್ರತಿಯೊಬ್ಬರೂ, ಪಕ್ಷಾತೀತವಾಗಿ ಆಗಮಿಸಿ ಅಮ್ಮನ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಎಚ್.ಡಿ.ರೇವಣ್ಣ ವಿನಂತಿಸಿದರು.
ಇದೇ ವೇಳೆ ತಂದೆ-ತಾಯಿ 72 ವರ್ಷ ಸುದೀರ್ಘ ವೈವಾಹಿಕ ಜೀವನ ನಡೆಸಿದ್ದನ್ನು ಸ್ಮರಿಸಿದ ರೇವಣ್ಣ, ತಂದೆಯ ಏಳಿಗೆಯಲ್ಲಿ ನಮ್ಮ ತಾಯಿ ಕೊಡುಗೆ ಅಪಾರ ಇದೆ. ನಾನು ಕುಮಾರಸ್ವಾಮಿ, ಈ ಮಟ್ಟಕ್ಕೆ ಬರಲು ಅವರ ಆಶೀರ್ವಾದ ಕಾರಣ, ಅವರ ಪೂಜಾಫಲದಿಂದ ನಮ್ಮ ಕುಟುಂಬ ಈ ಹಂತಕ್ಕೆ ಬೆಳೆದಿದೆ. ಮನೆಯೊಳಗಿದ್ದೇ ಎಲ್ಲವನ್ನೂ ಮಾಡಿದರು, ಅವರಿಗೆ ಇಷ್ಟೊಂದು ಅಭಿಮಾನಿಗಳು ಎಂದು ಗೊತ್ತಿರಲಿಲ್ಲ ಎಂದು ಭಾವುಕರಾದರು.
1962ರಲ್ಲಿ ನಮ್ಮ ತಂದೆ ಹೊಳೆನರಸೀಪುರದಲ್ಲಿ ಎರಡು ಕಡೆ 10 ರೂ. ಬಾಡಿಗೆ ಮನೆಯಲ್ಲಿದ್ದರು. ಅಲ್ಲಿ ಮತ್ತು ಆಗಲೇ ಪಡುವಲಹಿಪ್ಪೆಯಲ್ಲಿ ಒಡವೆ ಅಡಮಾನ ಇಟ್ಟು 1500 ರೂ.ಗೆ 12 ಎಕರೆ ಜಮೀನು ಖರೀದಿ ಮಾಡಿ 8 ಸಾವಿರದಲ್ಲಿ ಮಣ್ಣಿನ ಗೋಡೆ ಕಟ್ಟಿ ಮನೆ ನಿರ್ಮಿಸಿದ್ದರು. ಆ ಕಾರಣಕ್ಕೆ ಮೂರು ಕಡೆಗೂ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಹೋದ ಕಡೆ ಮಡಿಲಕ್ಕಿ ಕೊಟ್ಟು ಗೌರವಿಸಿದರು ಎಂದು ನೆನೆದರು.
ಅಪ್ಪಟ ದೈವಭಕ್ತರಾಗಿದ್ದ ತಾಯಿ ಕುಲದೇವರು ರಂಗನಾಥಸ್ವಾಮಿ ಪಾದದಡಿಯಲ್ಲಿ ಇರಬೇಕೆಂದು ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ನಮ್ಮ ತಂದೆ ಪಡುವಲಹಿಪ್ಪೆಯಲ್ಲಿ ಮಾಡೋಣ ಎಂದರು. ಆದರೆ ತಮ್ಮ ಕುಮಾರಸ್ವಾಮಿ ಇಲ್ಲೇ ಮಾಡೋಣ ಎಂದು ಹಠ ಹಿಡಿದರು.
ಅದಕ್ಕಾಗಿ ಅವರು ಮೊದಲೇ ಅಲ್ಲಿ ಜಾಗ ಖರೀದಿ ಮಾಡಿದ್ರು. ಹಾಗಾಗಿ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಸನ್ನಿಧಾನದ ತಟದಲ್ಲಿ ಅಂತ್ಯಕ್ರಿಯೆ ಮಾಡಿದೆವು ಎಂದು ವಿವರಿಸಿದರು.
ಅವರೆಂದೂ ಒಂದು ಮನೆ ಕಟ್ಟಲಿಲ್ಲ, ಒಂದು ಕಾರು ಖರೀದಿ ಮಾಡಿಲ್ಲ ಎಂದು ಕಣ್ಣೀರಿಟ್ಟರು. 2001 ರಲ್ಲಿ ಆ್ಯಸಿಡ್ ದಾಳಿ ನಡೆಯದಿದ್ದರೆ ಇನ್ನೂ 10 ವರ್ಷ ಬದುಕಿರುತ್ತಿದ್ದರು. ಆಗ ರೇವಣ್ಣನನ್ನ ಮುಗಿಸಲೇಬೇಕು ಎಂದು ಸಂಚು ರೂಪಿಸಿದ್ದರು. ಆದರೆ, ಅಂದು ಶಿವರಾತ್ರಿಯಂದು ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ, ಇಲ್ಲದಿದ್ದರೆ ನನ್ನ ಮೇಲೆ ದಾಳಿ ನಡೆಯುತ್ತಿತ್ತು. ನನ್ನ ಬದಲಿಗೆ ತಾಯಿ ನೋವು ತಿಂದರು ಎಂದರು.