ಚನ್ನರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು. ಶಾಸಕ ಸಿ.ಎನ್. ಬಾಲಕೃಷ್ಣ, ತಹಸೀಲ್ದಾರ್ ಶಂಕರಪ್ಪ , ಬಿಇಒ ಸತೀಶ್, ತಾಪಂ ಸಿಇಒ ಹರೀಶ್ ಇತರರು ಇದ್ದರು.
ಚನ್ನರಾಯಪಟ್ಟಣ :
ಪ್ರಕೃತಿ ವಿಕೋಪದಿಂದ ಉಂಟಾಗಿರುವ ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ತುರ್ತಾಗಿ ಸ್ಪಂದಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಈ ಬಾರಿ ಮಳೆ ಕೊರತೆಯಿಂದ ತಾಲೂಕಿನಲ್ಲಿ ಮುಂಗಾರು ಬೆಳೆಗಳು ಒಣಗಿವೆ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ, ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದರು. ಹೇಮಾವತಿ ಜಲಾಶಯದಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಕೊರತೆಯಾಗದಂತೆ ಕೂಡಲೇ ನಾಲೆಗಳಿಗೆ ನೀರು ಹರಿಸಿ ಈ ಭಾಗದ ಕೆರೆಗಳನ್ನು ತುಂಬಿಸಲು
ಸರ್ಕಾರ ಕ್ರಮ ವಹಿಸಬೇಕು ಎಂದರು.
ವಿಶ್ವದಲ್ಲೇ ಭಾರತ ಹಲವು ರಂಗದಲ್ಲಿ ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮಿದೆ. 80 ವರ್ಷದ ಅವಧಿಯಲ್ಲಿ ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಇದು ದೊಡ್ಡ ಹೆಮ್ಮೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಶಂಕರಪ್ಪ ಮಾತನಾಡಿ, ಪ್ರತಿಯೊಬ್ಬ ಭಾರತೀಯರ ಹೃದಯದಲ್ಲೂ ದೇಶಭಕ್ತಿಯ ಹೊಸ ಸಂಚಲನವನ್ನು ಮೂಡಿಸುವ ಐತಿಹಾಸಿಕ ದಿನವೇ ಆಗಸ್ಟ್ 15 ಎಂದರು.
ಭಾರತದ ಸ್ವಾತಂತ್ರ್ಯಹೋರಾಟವು ಒಂದು ದಿನದ ಕಥೆಯಲ್ಲ. ಇದು ಶತಮಾನದುದ್ದಕ್ಕೂ ನಡೆದ ದೀರ್ಘ ಮತ್ತು ಕಠಿಣ ಹೋರಾಟದ ಗಾಥೆ. ಇದನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಭಗತ್ ಸಿಂಗ್, ರಾಜಗುರು, ಸುಖದೇವ್ ಮೊದಲಾದ ಯುವ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಗಲ್ಲಿಗೇರುವಾಗಲೂ ಅವರಲ್ಲಿ ಅದಮ್ಯ ಉತ್ಸಾಹ ಇತ್ತು.
ಲಕ್ಷಾಂತರ ಹೋರಾಟಗಾರರು ಸ್ವದೇಶಿ ಚಳವಳಿಗೆ ಧುಮುಕಿ ಪ್ರಜಾರಾಜ್ಯ ನಿರ್ಮಿಸಲು
ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಹೊಣೆ, ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕಾಗಿದೆ ಎಂದು ತಿಳಿಸಿದರು
ಪೊಲೀಸ್, ಗೃಹರಕ್ಷಕ ದಳ, ಎನ್‌ಎನ್‌ಸಿ ತಂಡ, ಸೇರಿ ವಿವಿಧ ಶಾಲೆಗಳ ಪಥಸಂಚಲಕ್ಕೆ ಅಣಿಯಾಗಿದ್ದ ತಂಡಗಳಿಂದ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ನಂತರ ಪಥಸಂಚಲನ ತಂಡಗಳು ಧ್ವಜವಂದನೆ ಸಲ್ಲಿಸಿದ್ದು ಆಕರ್ಷಕವಾಗಿತ್ತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಬಿ.ಕೆ ಕುಮಾರಸ್ವಾಮಿ, ವಿನೋದ್, ಬಿ.ಎನ್. ದೊರೆಸ್ವಾಮಿ, ಸಿ.ಎಲ್. ಧನಲಕ್ಷ್ಮಿ, ಲತಾ (ತಾಯಮ್ಮ), ಸಿ.ಎಸ್.ಹರೀಶ್ ರಾವುತ್, ಶಂಕರಲಿಂಗೇಗೌಡ , ವೈ.ಆರ್.ತಿಪ್ಪೇಗೌಡ, ಮಂಜುನಾಥ, ಕೆ. ನಿಶಾಂಕ್, ಜೆ.ಎನ್.ಮಂಜು, ರಾಘು ಕದಂಬ, ವಿ.ಪಿ.ಪುಟ್ಟರೇವಣ್ಣ, ಮಂಜುನಾಥ, ಸಿದ್ದಾರ್ಥ ಎಂ ಚಕ್ರವರ್ತಿ, ಎಂ.ಡಿ. ಹರೀಶ್, ದ್ಯಾವಯ್ಯ, ಡಿ.ಬಿ.ನಾಗೇಂದ್ರ ಅವರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಕೆಪಿಎಸ್ ಪ್ರೌಢಶಾಲೆ ಪೇಟೆ ಪ್ರಥಮ,
ವಿವೇಕಾನಂದ ಅಂತಾರಾಷ್ಟ್ರೀಯ ಶಾಲೆ ದ್ವಿತೀಯ, ಪಂಥಸಂಚಲನದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ, ಎಸ್‌ವಿಜಿ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆಯಿತು.
ಪ್ರೌಢಶಾಲಾ ವಿಭಾಗದಲ್ಲಿ ಪೂರ್ಣಚಂದ್ರ ಶಾಲೆ ಪ್ರಥಮ, ಶಾಲಿನಿ ಶಾಲೆ ದ್ವಿತೀಯ ಮತ್ತು ಬಿಜಿಎಸ್ ವಿವೇಕಾನಂದ ಶಾಲೆ ತೃತೀಯ ಸ್ಥಾನ ಪಡೆಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ. ಆರ್.ಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶಮೂರ್ತಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ್ ಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಎನ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್, ಕಸಾಪ
ತಾಲೂಕು ಅಧ್ಯಕ್ಷ ಲೋಕೇಶ್, ಬಿಇಒ ಸತೀಶ್, ಬಿಆರ್‌ಸಿ ಅನಿಲ್ ತಾಪಂ ಸಿಇಒ ಹರೀಶ್, ನಗರ ಠಾಣಾ ವೃತ್ತ ನಿರೀಕ್ಷಕ ರಘುಪತಿ ಇತರರು ಇದ್ದರು.