ಹಾಸನಾಂಬ ಕಲಾಭವನದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕುರಿತು ಚುನಾಯಿತ ಜನಪ್ರತಿನಿಧಿಗಳು, ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್‌ರ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಿಸಿ ಲತಾ ಕುಮಾರಿ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣ ಮೂರ್ತಿ, ತಹಸೀಲ್ದಾರ್ ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಇತರರಿದ್ದರು. 
ಹಾಸನ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ
  • ತರಬೇತಿ ಕಾರ್ಯಕ್ರಮದಲ್ಲಿ ಡಿಸಿ ಮನವಿ
  • ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ
ಹಾಸನ: ಪ್ರತಿ ಬೂತ್‌ಗಳಿಗೂ ರಾಜಕೀಯ ಪಕ್ಷಗಳು ತಮ್ಮ ಏಜೆಂಟ್ ನೇಮಕ ಮಾಡಬೇಕು. ಇದರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕಾರಿ ಆಗಲಿದೆ. ಜತೆಗೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಭವನದಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕುರಿತು ಹಾಸನ ವಿಧಾನ ಸಭಾ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು, ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್ ಅವರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತಗಟ್ಟೆ ಅಧಿಕಾರಿಗಳು ಜೂ.30 ರಿಂದ ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪೂರ್ವದಲ್ಲಿ ಮುದ್ರಣ ಗೊಂಡಿರುವ ನಮೂನೆಯನ್ನು ದ್ವಿ ಪ್ರತಿಯಲ್ಲಿ ನೀಡುತ್ತಾರೆ. ಮತದಾರರು ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಪ್ರಸ್ತುತ ಭಾವಚಿತ್ರ ಅಂಟಿಸಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಗೆ ಹಿಂದಿರುಗಿಸಬೇಕು ಎಂದರು.
ಪ್ರಜಾ ಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಮತದಾರರ ಪಟ್ಟಿ ತಯಾರಿಸುವುದು ಸಂವಿಧಾನಾತ್ಮಕ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವು ನಡೆಯುತ್ತಿದ್ದು, 2025ರ ಮತದಾರರ ಪಟ್ಟಿಯಲ್ಲಿರುವ ಹೆಸರಿಗೆ ಸಂಬಂಧಿಸಿದಂತೆ 2002ರಲ್ಲಿರುವ ಮತದಾರರ ಪಟ್ಟಿಯ ಮತದಾರರ ಕುಟುಂಬದ ಸಂತತಿಗಳಿಗೆ ಮ್ಯಾಪಿಂಗ್ ಮಾಡಿ ಲಿಂಕ್ ಮಾಡಲಾಗುತ್ತಿರುವುದರಿಂದ ಯಾವ ಪ್ರಜೆಯು ಮತದಾನದಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.
ಈಗಾಗಲೇ 16 ರಾಜ್ಯಗಳಲ್ಲಿ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮುಗಿದಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಉಳಿದ ರಾಜ್ಯಗಳಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿಯೂ ನಡೆಯುತ್ತಿದೆ. ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಯವರ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾಸ್ಟರ್ ಟ್ರೈನರ್‌ಗಳು ಸರಿಯಾಗಿ ಅರ್ಥ ಮಾಡಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ಗೊಂದಲವಿಲ್ಲದಂತೆ ಪರಿಣಾಮಕಾರಿಯಾಗಿ ತರಬೇತಿ ನೀಡಲು ಕ್ರಮವಹಿಸಿ ಎಂದು ತಿಳಿಸಿದರು.
8 ರಿಂದ 10 ಮತಗಟ್ಟೆ ಅಧಿಕಾರಿಗಳು ಒಬ್ಬ ಮೇಲ್ವಿಚಾರಕರು ನೋಡಬೇಕಾಗುತ್ತದೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಗಂಭೀರವಾಗಿ ಪರಿಗಣಿಸಿ ಮೇಲ್ವಿಚಾರಕರು ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯದಂತೆ ನಿಗಾವಹಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಾಸನ ಜಿಲ್ಲೆಯು ಶೇ.98 ರಷ್ಟು ಮ್ಯಾಪಿಂಗ್ ಆಗಿರುವುದು ಜಿಲ್ಲೆಗೆ ಹೆಮ್ಮೆ ತರುವಂತಹ ವಿಷಯವಾಗಿದೆ, ಉಳಿದ ಶೇ.2 ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಜಿಲ್ಲೆಗೆ ಉತ್ತಮ ಹೆಸರನ್ನು ತರುವಂತೆ ತಿಳಿಸಿದರು.
ಆ. 5ರಂದು ಕರಡು ಪಟ್ಟಿ ಬಿಡುಗಡೆ
ಕರಡು ಮತದಾರರ ಪಟ್ಟಿಯನ್ನು ಆ.5, 2026 ರಂದು ಪ್ರಕಟಿಸಲಾಗುತ್ತದೆ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ 5, 2026 ರಿಂದ 4 ಸೆ.2026ರ ವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ತಿರುವಳಿ ಆ.5 ರಿಂದ ಅ.3, 2026 ರವರೆಗೆ, ಅಂತಿಮ ಮತದಾರರ ಪಟ್ಟಿಯನ್ನು ಅ.7, 2026 ರಂದು ಪ್ರಕಟಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವರ್ಷದಲ್ಲಿ ನಾಲ್ಕು ಬಾರಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ 1 ರಂದು ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತದೆ ಆ ಸಂದರ್ಭದಲ್ಲಿ 18 ವರ್ಷ ಪೂರೈಸಿದವರು ಹೊಸ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಾಗಿ ಹೊಸ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣ ಮೂರ್ತಿ, ತಹಸೀಲ್ದಾರ್ ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಇತರರಿದ್ದರು.